Saturday, November 14, 2026
spot_img

ಪಾವಗಡ ತಾಲ್ಲೂಕು ಆಸ್ಪತ್ರೆ ಆಹಾರ ಟೆಂಡರ್‌ನಲ್ಲಿ ಸುಳ್ಳು ದಾಖಲೆ ಆರೋಪ; ದೂರಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ದ ಆಯುಕ್ತರಿಗೆ ದೂರು

**ಪಾವಗಡ ತಾಲ್ಲೂಕು ಆಸ್ಪತ್ರೆ ಆಹಾರ ಟೆಂಡರ್‌ನಲ್ಲಿ ಸುಳ್ಳು ದಾಖಲೆ ಆರೋಪ; ದೂರಿಗೆ ಸ್ಪಂದಿಸದ ಅಧಿಕಾರಿಗಳು**

**ಮಂಡ್ಯ, ನ. 14:** ಪಾವಗಡ ತಾಲ್ಲೂಕು ಆಸ್ಪತ್ರೆಯ ಒಳರೋಗಿಗಳಿಗೆ ಸಿದ್ಧಪಡಿಸಿದ ಆಹಾರ ಒದಗಿಸುವ ಟೆಂಡರ್ ಪಡೆದಿರುವ ಏಜೆನ್ಸಿಯು ಸುಳ್ಳು ಅನುಭವ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಟೆಂಡರ್ ಗಿಟ್ಟಿಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮವಾಗಿಲ್ಲ ಎಂದು ಆರೋಪಿಸಿರುವ ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯ ಎಂ.ಬಿ. ನಾಗಣ್ಣಗೌಡ ಅವರು, ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ದೂರಿನ ಪ್ರಕಾರ, ಏಜೆನ್ಸಿಯು ಟೆಂಡರ್ ಪ್ರಕ್ರಿಯೆಯಲ್ಲಿ ಬಂಗಾರಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ ಸಿದ್ಧಪಡಿಸಿದ ಆಹಾರ ಒದಗಿಸಿರುವುದಾಗಿ ಹಾಗೂ ವಿಜಯಪುರ ಮತ್ತು ದೇವನಹಳ್ಳಿ ಆರೋಗ್ಯ ಕೇಂದ್ರಗಳಿಗೂ ಇದೇ ರೀತಿಯ ಸೇವೆ ನೀಡಿರುವುದಾಗಿ ಪ್ರಮಾಣ ಪತ್ರ ಸಲ್ಲಿಸಿದೆ. ಆದರೆ ವಾಸ್ತವದಲ್ಲಿ ಬಂಗಾರಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಸಿದ್ಧಪಡಿಸಿದ ಆಹಾರ ಒದಗಿಸುವ ಯಾವುದೇ ವ್ಯವಸ್ಥೆ ಈವರೆಗೂ ಜಾರಿಯಲ್ಲಿಲ್ಲ ಎಂದು ದೂರುದಾರರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಡಿಜೆಐಡಿ ಅಧಿಕಾರಿಗಳು ಭೇಟಿ ನೀಡಿ, ಅಲ್ಲಿ ಡಯಟ್ ವ್ಯವಸ್ಥೆ ಜಾರಿಗೊಳಿಸುವಂತೆ ಸೂಚಿಸಿದ್ದಾರೆ. ಇದರಿಂದ ಸಲ್ಲಿಸಲಾದ ಅನುಭವ ಪ್ರಮಾಣ ಪತ್ರಗಳು ಸುಳ್ಳು ಎಂಬುದು ಸ್ಪಷ್ಟವಾಗುತ್ತದೆ ಎಂಬುದು ಅವರ ವಾದ.

ಸರ್ಕಾರದ ಹಣವನ್ನು ಲಪಟಾಯಿಸುವ ಉದ್ದೇಶದಿಂದ ಟೆಂಡರ್ ಅನುಮೋದನಾ ಪ್ರಾಧಿಕಾರಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಏಜೆನ್ಸಿಯೊಂದಿಗೆ ಶಾಮೀಲಾಗಿರುವ ಸಾಧ್ಯತೆ ಇದೆ ಎಂದೂ ಅವರು ಆರೋಪಿಸಿದ್ದಾರೆ.

**ಮೂರು ಬಾರಿ ಮನವಿ, ಉತ್ತರವಿಲ್ಲ:** ನಾಗಣ್ಣಗೌಡ ಅವರು ಅಕ್ಟೋಬರ್ 11ರಂದು ಪಾವಗಡ ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಿಗೆ ಮಿಂಚಂಚೆ ಮೂಲಕ ದೂರು ನೀಡಿದ್ದರು. ಕೈಗೊಂಡ ಕ್ರಮದ ಮಾಹಿತಿ ಕೋರಿ ಅಕ್ಟೋಬರ್ 23ರಂದು ಮತ್ತೊಮ್ಮೆ ಮಿಂಚಂಚೆ ಕಳುಹಿಸಿದ್ದರು. ನವೆಂಬರ್ 4ರಂದು ಲಿಖಿತ ಜ್ಞಾಪನ ಪತ್ರ ಸಲ್ಲಿಸಿ, ಕ್ರಮ ಕೈಗೊಳ್ಳದಿದ್ದರೆ ಸಕ್ಷಮ ಪ್ರಾಧಿಕಾರಕ್ಕೆ ದೂರು ನೀಡುವುದಾಗಿ ಎಚ್ಚರಿಸಿದ್ದರು. ಆದರೂ ಆಡಳಿತ ವೈದ್ಯಾಧಿಕಾರಿಗಳು ಕನಿಷ್ಠ ಉತ್ತರವನ್ನೂ ನೀಡಿಲ್ಲ ಎಂದು ಅವರು ದೂರಿದ್ದಾರೆ. ಇದು ತಪ್ಪಿತಸ್ಥರನ್ನು ರಕ್ಷಿಸುವ ಉದ್ದೇಶದಿಂದ ಕೂಡಿದೆ ಎಂದು ಭಾವಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

**ಆಯುಕ್ತರಿಗೆ ಸಲ್ಲಿಸಿದ ಬೇಡಿಕೆಗಳು:** ನವೆಂಬರ್ 13ರಂದು ಸಲ್ಲಿಸಿದ ದೂರಿನಲ್ಲಿ ಅವರು ಈ ಕೆಳಕಂಡ ಕ್ರಮಗಳಿಗೆ ಆಗ್ರಹಿಸಿದ್ದಾರೆ:

– ಅನುಭವ ಪ್ರಮಾಣ ಪತ್ರಗಳ ಸತ್ಯಾಸತ್ಯತೆಯ ಬಗ್ಗೆ ಸ್ವತಂತ್ರ ತನಿಖೆ
– ಸುಳ್ಳು ದಾಖಲೆ ಸಾಬೀತಾದರೆ ಟೆಂಡರ್ ರದ್ದು, ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಿ ಕಾನೂನು ಕ್ರಮ
– ಶಾಮೀಲಾಗಿರುವ ಅಧಿಕಾರಿ ಹಾಗೂ ಸಿಬ್ಬಂದಿಯ ವಿರುದ್ಧ ಶಿಸ್ತುಕ್ರಮ
– ದೂರಿನ ಬಗ್ಗೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ
– ಕೈಗೊಂಡ ಕ್ರಮದ ಬಗ್ಗೆ ದೂರುದಾರರಿಗೆ ಲಿಖಿತ ಮಾಹಿತಿ

ಇಲಾಖೆ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ಲೋಕಾಯುಕ್ತ ಹಾಗೂ ಸರ್ಕಾರದ ಮುಂದೆ ದೂರು ಸಲ್ಲಿಸಲಾಗುವುದು ಎಂದು ನಾಗಣ್ಣಗೌಡ ಎಚ್ಚರಿಸಿದ್ದಾರೆ. ದೂರಿನ ಪ್ರತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು, ತುಮಕೂರು ಜಿಲ್ಲಾಧಿಕಾರಿಗಳು ಹಾಗೂ ಪಾವಗಡ ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಿಗೂ ಕಳುಹಿಸಲಾಗಿದೆ.

—

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!