Thursday, November 12, 2026
spot_img

ARAI ಪರೀಕ್ಷಾ ಕೇಂದ್ರಕ್ಕೆ 100 ಎಕರೆ ಜಮೀನು ಮಂಜೂರಾತಿಗೆ ರೈತರ ವಿರೋಧ; ಡಿಸಿಗೆ ಆಕ್ಷೇಪಣಾ ಮನವಿ

ಪರೀಕ್ಷಾ ಕೇಂದ್ರಕ್ಕೆ 100 ಎಕರೆ ಜಮೀನು ಮಂಜೂರಾತಿಗೆ ರೈತರ ವಿರೋಧ; ಡಿಸಿಗೆ ಆಕ್ಷೇಪಣಾ ಮನವಿ ಪರೀಕ್ಷಾ ಕೇಂದ್ರಕ್ಕೆ 100 ಎಕರೆ ಜಮೀನು ಮಂಜೂರಾತಿಗೆ ರೈತರ ವಿರೋಧ; ಡಿಸಿಗೆ ಆಕ್ಷೇಪಣಾ ಮನವಿ

ಮಂಡ್ಯ:: ತಾಲೂಕಿನ ಬಸರಾಳು ಸಮೀಪದ ಮದ್ದನಘಟ್ಟ ಗ್ರಾಮದ ಸರ್ವೆ ನಂ.48 ಹಾಗೂ ಹೆಗ್ಗಡತಳ್ಳಿ ಗ್ರಾಮದ ಸರ್ವೆ ನಂ.35ರ ವ್ಯಾಪ್ತಿಯ ಒಟ್ಟು 100 ಎಕರೆ ಜಮೀನನ್ನು ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಪರೀಕ್ಷಾ ಕೇಂದ್ರ ಸ್ಥಾಪನೆಗಾಗಿ ಕೆಐಎಡಿಬಿಗೆ ಮಂಜೂರು ಮಾಡುವ ಪ್ರಸ್ತಾವನೆಗೆ ಬಾಧಿತ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬಸರಾಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮದ್ದನಘಟ್ಟ ಮಹಾಲಿಂಗೇಗೌಡ ಹಾಗೂ ಸಾಮಾಜಿಕ ಕಾರ್ಯಕರ್ತ ಕೆ.ಆರ್. ರವೀಂದ್ರ ಅವರ ನೇತೃತ್ವದಲ್ಲಿ ಮದ್ದನಘಟ್ಟ, ಹೆಗ್ಗಡತಳ್ಳಿ, ವಡ್ಡರಹಳ್ಳಿ ಹಾಗೂ ನರಗಲು ಗ್ರಾಮಗಳ ರೈತರು ಮತ್ತು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣಾ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿಗಳ ಪರವಾಗಿ ನಗರಾಭಿವೃದ್ಧಿ ಯೋಜನಾ ಕೋಶದ ಕಾರ್ಯಪಾಲಕ ಎಂಜಿನಿಯರ್ ಪ್ರತಾಪ್ ಮನವಿ ಸ್ವೀಕರಿಸಿದರು.

ರೈತರ ಸಭೆ ನಡೆಸದೆ, ಜಮೀನು ಸಾಗುವಳಿ ಮಾಡುತ್ತಿರುವವರಿಗೆ ನೋಟಿಸ್ ನೀಡದೆ ಹಾಗೂ ಅವರ ಲಿಖಿತ ಒಪ್ಪಿಗೆ ಪಡೆಯದೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಅಲ್ಲದೆ, 100 ಎಕರೆ ಜಮೀನು ಸಂಪೂರ್ಣ ಒತ್ತುವರಿಮುಕ್ತವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಸ್ಥಳದ ವಾಸ್ತವ ಸ್ಥಿತಿಗೆ ವಿರುದ್ಧವಾಗಿದೆ ಎಂದೂ ಆಕ್ಷೇಪಿಸಿದ್ದಾರೆ.

ಪ್ರಸ್ತಾವಿತ ಸರ್ವೆ ನಕ್ಷೆಯ ಗಡಿಯಿಂದ ಕೆಲವು ರೈತರ ಜಮೀನುಗಳನ್ನು ಉದ್ದೇಶಪೂರ್ವಕವಾಗಿ ಹೊರಗಿಟ್ಟು, ಇನ್ನು ಕೆಲವರ ಜಮೀನುಗಳನ್ನು ಸೇರ್ಪಡೆ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿರುವ ರೈತರು, ಈ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ನಕ್ಷೆಯಲ್ಲಿನ ಎ, ಬಿ, ಸಿ, ಡಿ ಬ್ಲಾಕ್‌ಗಳು ಸೇರಿದಂತೆ ಹೊರಗಿಡಲಾದ ಜಮೀನುಗಳ ನಿಖರ ವಿಸ್ತೀರ್ಣ ಮತ್ತು ಮಂಜೂರಾತಿ ದಾಖಲೆಗಳನ್ನು ಪರಿಶೀಲಿಸಬೇಕು ಹಾಗೂ ನಕಲಿ ದಾಖಲೆ, ಪಕ್ಷಪಾತ ಮತ್ತು ಅಧಿಕಾರ ದುರುಪಯೋಗದ ಆರೋಪಗಳ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನಾಲ್ಕೂ ಗ್ರಾಮಗಳ ಬಾಧಿತ ರೈತರ ಸಭೆ ಕರೆದು ಅಹವಾಲು ಆಲಿಸಬೇಕು; ರೈತರ ಸಮ್ಮುಖದಲ್ಲಿ ಜಂಟಿ ಮರುಸರ್ವೆ ಹಾಗೂ ಸ್ಥಳ ಪರಿಶೀಲನೆ ನಡೆಸಿ ಜಮೀನಿನ ವಾಸ್ತವ ಸ್ಥಿತಿಯನ್ನು ದೃಢಪಡಿಸಬೇಕು. ರೈತರ ದಾಖಲೆಗಳನ್ನು ಪರಿಶೀಲಿಸಿ ಕಾರಣಸಹಿತ ಲಿಖಿತ ತೀರ್ಮಾನ ನೀಡುವವರೆಗೆ ಜಮೀನು ತೆರವು, ನಿಂತ ಬೆಳೆಗಳಿಗೆ ಹಾನಿ, ಪಹಣಿ ದಾಖಲಾತಿ ರದ್ದು ಹಾಗೂ ಬಾಕಿ ಇರುವ ಮಂಜೂರಾತಿ ಅರ್ಜಿಗಳ ತಿರಸ್ಕಾರ ಸೇರಿದಂತೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಆಗ್ರಹಿಸಿದ್ದಾರೆ. ಜೊತೆಗೆ, ಜಮೀನನ್ನು ಕೆಐಎಡಿಬಿಗೆ ವರ್ಗಾಯಿಸುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ರೈತರ ಕೃಷಿ ಹಕ್ಕು ಮತ್ತು ಜೀವನೋಪಾಯ ರಕ್ಷಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

“ಫ್ಯಾಕ್ಟರಿ ಬೇಡ, ಜಮೀನು ಬಿಟ್ಟುಕೊಡುವುದಿಲ್ಲ”

“ನಾವು ಹಲವು ವರ್ಷಗಳಿಂದ ಈ ಜಮೀನನ್ನೇ ನಂಬಿ ಬದುಕುತ್ತಿದ್ದೇವೆ. ಪ್ರತಿದಿನ ಬೆಳಗ್ಗೆ ಏಳು ಗಂಟೆಗೆ ಜಮೀನಿಗೆ ತೆರಳಿ ದನ, ಕರು, ಎಮ್ಮೆಗಳನ್ನು ಮೇಯಿಸುತ್ತೇವೆ. ಬೇರೆ ಕಡೆ ನಮಗೆ ಯಾವುದೇ ಜಾಗ ಅಥವಾ ವ್ಯವಸ್ಥೆ ಇಲ್ಲ. ಫ್ಯಾಕ್ಟರಿ ನಿರ್ಮಿಸಿ ಉದ್ಯೋಗ ನೀಡುತ್ತೇವೆ ಎನ್ನುತ್ತಿದ್ದಾರೆ. ನಮಗೆ ಉದ್ಯೋಗವೂ ಬೇಡ, ಫ್ಯಾಕ್ಟರಿಯೂ ಬೇಡ. ಜಮೀನನ್ನು ಯಾವ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಜಮೀನಿಗಾಗಿ ರಕ್ತ ಕೊಡಲೂ ಸಿದ್ಧ,” ಎಂದು ರೈತ ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ದಿನೇಶ್, ವಸಂತಕುಮಾರ್, ರಾಜೇಗೌಡ, ವೆಂಕಟೇಶ್, ಮರೀಗೌಡ, ಕುಮಾರ್, ತೇಜಸ್ ಗೌಡ, ಜಯಲಕ್ಷ್ಮಿ, ಜಯಮ್ಮ, ಚಿಕ್ಕಮ್ಮ, ಕೆಂಪಮ್ಮ, ರಾಮಲಿಂಗೇಗೌಡ, ದೊಡ್ಡತಾಯಮ್ಮ, ಮರಿಯಮ್ಮ, ಕಾಳಬೋರೇಗೌಡ, ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!