ಮೆಟ್ರೋ ಉದ್ಘಾಟನೆ ಕಾರ್ಯಕ್ರಮ: ಸಚಿವ ಕೃಷ್ಣ ಬೈರೇಗೌಡರ ಭಾಷಣಕ್ಕೆ ಕೊಕ್; “ನ್ಯಾಯ ಕೇಳಿದ್ದಕ್ಕೆ ಸಿಕ್ಕ ಬಹುಮಾನ” ಎಂದು ಆಕ್ರೋಶ
ಬೆಂಗಳೂರು: ನಗರದ ಮೆಟ್ರೋ ಮಾರ್ಗ ಉದ್ಘಾಟನೆ ಕಾರ್ಯಕ್ರಮದ ಅಂತಿಮ ವೇಳಾಪಟ್ಟಿಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಭಾಷಣವನ್ನು ಕೈಬಿಡಲಾಗಿದೆ. ಈ ಬಗ್ಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಐಐಎಂಬಿ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದ ಮೊದಲ ಕರಡು ಪಟ್ಟಿಯಲ್ಲಿ (ಯೋಜಿತ ಕಾರ್ಯಕ್ರಮ ಪಟ್ಟಿ) ಸಂಸದ ತೇಜಸ್ವಿ ಸೂರ್ಯ ಅವರ ಸ್ವಾಗತ ಭಾಷಣದ ನಂತರ ಕೃಷ್ಣ ಬೈರೇಗೌಡ ಅವರ ಭಾಷಣಕ್ಕೆ ಅವಕಾಶ ನಿಗದಿಯಾಗಿತ್ತು. ಆದರೆ ಬುಧವಾರ ರಾತ್ರಿ ಬಂದ ಪರಿಷ್ಕೃತ ಪಟ್ಟಿಯಲ್ಲಿ ಅವರ ಹೆಸರನ್ನು ಕಡಿತಗೊಳಿಸಲಾಗಿದೆ. ಪರಿಷ್ಕೃತ ಪಟ್ಟಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯಪಾಲೆ ಡಾ. ಸುಧಾ ಯಾದವ್ ಅವರ ಭಾಷಣಗಳು ಉಳಿದುಕೊಂಡಿವೆ.
ಕಾರ್ಯಕ್ರಮದಲ್ಲಿ ಪ್ರಧಾನಿ ಅವರು ಫಲಕ ಅನಾವರಣ ಮಾಡಲಿದ್ದು, ಬೆಂಗಳೂರು–ಮಂಗಳೂರು–ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ನಂತರ ಅವರು ಭಾಷಣ ಮಾಡಲಿದ್ದು, ಮುಖ್ಯಮಂತ್ರಿ ಸ್ಮರಣಿಕೆ ನೀಡಲಿದ್ದಾರೆ.
ಇದು ಶಿಕ್ಷೆ
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಕೃಷ್ಣ ಬೈರೇಗೌಡ, “ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೇಳಿದ್ದಕ್ಕೆ ಸಿಕ್ಕ ಬಹುಮಾನ – ನನ್ನ ಭಾಷಣ ಕಟ್!” ಎಂದು ಹೇಳಿದ್ದಾರೆ.
“ಬಹುತೇಕ ಬಂಡವಾಳ ಖರ್ಚು ನಮ್ಮದು. ಕರ್ನಾಟಕಕ್ಕೆ ನ್ಯಾಯಯುತ ಪಾಲು ಕೇಳಿದರೆ ಈ ರೀತಿ ಶಿಕ್ಷೆ ನೀಡಲಾಗುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.
“ಪರವಾಗಿಲ್ಲ, ನೀವು ನನ್ನ ಮಾತನ್ನು ಕಟ್ ಮಾಡಬಹುದು. ಆದರೆ ಬೆಂಗಳೂರಿನ ಅಭಿವೃದ್ಧಿಗೆ ಕೆಲಸ ಮಾಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಇನ್ನೂ ಹೆಚ್ಚಿನ ಪರಿಶ್ರಮದಿಂದ ಕೆಲಸ ಮಾಡುತ್ತೇವೆ” ಎಂದು ಸಚಿವರು ಹೇಳಿದ್ದಾರೆ.


