Thursday, November 12, 2026
spot_img

ಕೇಂದ್ರ ಸ್ಥಾನದಲ್ಲಿ ವೈದ್ಯರು:ಕರ್ತವ್ಯ ಆ್ಯಪ್ ಕಟ್ಟುನಿಟ್ಟಿನ ಜಾರಿಗೆ ಸುತ್ತೋಲೆ

**ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ಸಿಬ್ಬಂದಿಗೆ ರಾತ್ರಿ ಹಾಜರಾತಿ ಕಡ್ಡಾಯ: ಕರ್ತವ್ಯ ಆ್ಯಪ್‌ನಲ್ಲಿ ದಾಖಲಿಸಲು ಸುತ್ತೋಲೆ**

ಬೆಂಗಳೂರು, ನ. 11: ರಾಜ್ಯದ ತಾಲ್ಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಹಾಗೂ ಇತರ ಸಿಬ್ಬಂದಿ ಕೇಂದ್ರ ಸ್ಥಾನದಲ್ಲೇ ವಾಸವಿರುವುದನ್ನು ಖಾತ್ರಿಪಡಿಸಲು, ‘ಕರ್ತವ್ಯ’ ಆ್ಯಪ್ ಮೂಲಕ ರಾತ್ರಿ ಹಾಜರಾತಿ ದಾಖಲಿಸುವುದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಪ್ರಜಾ ಸೇವಾ ಇಲಾಖೆಯ ಅಕ್ಟೋಬರ್ 17ರ ಸರ್ಕಾರಿ ಆದೇಶದಂತೆ, ನವೆಂಬರ್ 1ರಿಂದ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಯಲ್ಲಿದೆ. ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಈಗ ವಿವರವಾದ ಮಾರ್ಗಸೂಚಿ ನೀಡಲಾಗಿದೆ.

**ವೈದ್ಯರಿಗೆ ಸೂಚನೆ**
– ಪ್ರತಿದಿನ ರಾತ್ರಿ 9 ಗಂಟೆಯ ನಂತರ, ತಮ್ಮ ಕೇಂದ್ರ ಸ್ಥಾನ ಇರುವ ನಗರ, ಪಟ್ಟಣ ಅಥವಾ ಗ್ರಾಮದ ಭೌಗೋಳಿಕ ಮಿತಿಯೊಳಗಿದ್ದು ಆ್ಯಪ್ ಮೂಲಕ ಹಾಜರಾತಿ ದಾಖಲಿಸಬೇಕು.
– ಮಂಜೂರಾದ ರಜೆಯಲ್ಲಿದ್ದಾಗ, ಸೂಕ್ತ ಅನುಮತಿಯೊಂದಿಗೆ ಕೇಂದ್ರ ಸ್ಥಾನದ ಹೊರಗೆ ಕರ್ತವ್ಯದಲ್ಲಿದ್ದಾಗ, ಅಥವಾ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಕೇಂದ್ರ ಸ್ಥಾನ ಬಿಟ್ಟಿದ್ದಾಗ ಮಾತ್ರ ವಿನಾಯಿತಿ ಇರುತ್ತದೆ. ಆ ದಿನ ಕಾರಣವನ್ನು ಆ್ಯಪ್‌ನಲ್ಲಿ ದಾಖಲಿಸುವುದು ಕಡ್ಡಾಯ.
– ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ. ಅನುಮತಿಯಿಲ್ಲದೆ ವ್ಯಾಪ್ತಿಯ ಹೊರಗೆ ವಾಸಿಸುವುದು ಅನಿಯಮಿತವಾಗಿರುತ್ತದೆ.

**ಇತರ ಸಿಬ್ಬಂದಿಗೂ ಅನ್ವಯ**
ಶುಶ್ರೂಷಾಧಿಕಾರಿಗಳು, ಫಾರ್ಮಸಿ ಅಧಿಕಾರಿಗಳು, ಪ್ರಯೋಗಶಾಲಾ ತಂತ್ರಜ್ಞರು ಸೇರಿದಂತೆ ಎಲ್ಲ ಸಿಬ್ಬಂದಿ ಕೇಂದ್ರ ಸ್ಥಾನದಲ್ಲೇ ವಾಸಿಸಬೇಕು ಮತ್ತು ರಾತ್ರಿ 9ರ ನಂತರ ಆ್ಯಪ್ ಮೂಲಕ ಹಾಜರಾತಿ ದಾಖಲಿಸಬೇಕು. ವೈದ್ಯರಿಗೆ ಇರುವ ವಿನಾಯಿತಿಗಳೇ ಇವರಿಗೂ ಅನ್ವಯ.

**ಡಿಡಿಒ, ತಾಲ್ಲೂಕು ಆರೋಗ್ಯಾಧಿಕಾರಿಗಳ ಹೊಣೆ**
– ತಮ್ಮ ವ್ಯಾಪ್ತಿಯ ಎಲ್ಲ ವೈದ್ಯರು ಮತ್ತು ಸಿಬ್ಬಂದಿ ಆ್ಯಪ್‌ನಲ್ಲಿ ನೋಂದಣಿಯಾಗಿರುವುದನ್ನು ಹಾಗೂ ಕೇಂದ್ರ ಸ್ಥಾನದ ವಿವರ ಮತ್ತು ಜಿಯೋ-ಫೆನ್ಸಿಂಗ್ ಸರಿಯಾಗಿ ದಾಖಲಾಗಿರುವುದನ್ನು ತಕ್ಷಣ ಖಾತ್ರಿಪಡಿಸಿಕೊಳ್ಳಬೇಕು.
– ರಜೆ, ಕೇಂದ್ರ ಸ್ಥಾನದ ಹೊರಗಿನ ಕರ್ತವ್ಯ ಮತ್ತು ಕೇಂದ್ರ ಬಿಡಲು ನೀಡಿದ ಅನುಮತಿಗಳನ್ನು ಲಿಖಿತವಾಗಿ ಮಂಜೂರು ಮಾಡಿ ದಾಖಲೆಯಲ್ಲಿ ಇಟ್ಟುಕೊಳ್ಳಬೇಕು.
– ರಾತ್ರಿ ಹಾಜರಾತಿಯನ್ನು ಪ್ರತಿದಿನ ಪರಿಶೀಲಿಸಿ, ಹಾಜರಾತಿ ದಾಖಲಿಸದ ಅಥವಾ ಸೂಕ್ತ ಕಾರಣ ನೀಡದವರ ವಿವರಗಳನ್ನು ವಾರಕ್ಕೊಮ್ಮೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ತಿಳಿಸಬೇಕು.
– ಆ್ಯಪ್‌ಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಜಿಲ್ಲಾ ಅಧಿಕಾರಿಗಳ ಗಮನಕ್ಕೆ ತರಬೇಕು.

**ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಹೊಣೆ**
– ಸುತ್ತೋಲೆ ಮತ್ತು ಸರ್ಕಾರಿ ಆದೇಶವನ್ನು ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ಸಿಬ್ಬಂದಿಗೆ ತಲುಪಿಸಿ ಸ್ವೀಕೃತಿ ಪಡೆಯಬೇಕು.
– ರಾತ್ರಿ ಹಾಜರಾತಿ ವರದಿಗಳನ್ನು ಪ್ರತಿ ತಿಂಗಳು ಪರಿಶೀಲಿಸಬೇಕು.
– ಅನುಮತಿಯಿಲ್ಲದೆ ಕೇಂದ್ರ ಸ್ಥಾನದಲ್ಲಿ ವಾಸವಿಲ್ಲದಿರುವುದು ಕಂಡುಬಂದರೆ, ನಿಯಮಗಳು ಮತ್ತು 1965ರ ಸುತ್ತೋಲೆಯಂತೆ ಕ್ರಮ ಕೈಗೊಳ್ಳಬೇಕು.
– ಜಿಲ್ಲೆಯ ಮಾಸಿಕ ಕ್ರೋಢೀಕೃತ ವರದಿಯನ್ನು (ಒಟ್ಟು ವೈದ್ಯರು ಮತ್ತು ಸಿಬ್ಬಂದಿ, ನೋಂದಾಯಿತರು, ಹಾಜರಾತಿ ದಾಖಲಿಸದವರು, ಕೈಗೊಂಡ ಕ್ರಮ) ಪ್ರತಿ ತಿಂಗಳ 10ನೇ ತಾರೀಖಿನೊಳಗೆ ಆಯುಕ್ತರ ಕಚೇರಿಗೆ ಸಲ್ಲಿಸಬೇಕು.

**ಎಚ್ಚರಿಕೆ**
ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪಾಲನೆಯಲ್ಲಿ ಲೋಪ ಕಂಡುಬಂದರೆ, ಸಂಬಂಧಿಸಿದ ವೈದ್ಯರು ಮತ್ತು ಸಿಬ್ಬಂದಿಯೊಂದಿಗೆ, ಮೇಲ್ವಿಚಾರಣೆಯಲ್ಲಿ ವಿಫಲರಾದ ಡಿಡಿಒಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳನ್ನೂ ವೈಯಕ್ತಿಕವಾಗಿ ಜವಾಬ್ದಾರರನ್ನಾಗಿ ಪರಿಗಣಿಸಿ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!