ಮದ್ದೂರಿನಲ್ಲಿ 40% ಕಮಿಷನ್ ದಂಧೆ ಹಾಗೂ ನನ್ನ ಸಾಧನೆಗಳ ಹೈಜಾಕ್: ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ಗಂಭೀರ ಆರೋಪ
ಮಂಡ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮದ್ದೂರು ಕ್ಷೇತ್ರದ ಮಾಜಿ ಶಾಸಕ ಡಿ.ಸಿ. ತಮ್ಮಣ್ಣ, ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮಗಳು ಹಾಗೂ ತಮ್ಮ ಅವಧಿಯಲ್ಲಿ ಮಂಜೂರಾದ ಯೋಜನೆಗಳನ್ನು ಈಗಿನವರು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಸೂಳೆಕೆರೆಯಲ್ಲಿ 45 ಕೋಟಿ ರೂಪಾಯಿ ವೆಚ್ಚದಲ್ಲಿ ಹೂಳು ಎತ್ತುವ ಕಾಮಗಾರಿ ನಡೆಯುತ್ತಿದ್ದು, ಇಲ್ಲಿ ಟ್ರ್ಯಾಕ್ಟರ್ ಮಣ್ಣನ್ನು 3,000 ದಿಂದ 3,500 ರೂ.ಗಳಿಗೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು. ಈ ಮಣ್ಣು ಮಾರಾಟ ಮಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದ ಅವರು, ಮಾರಗೌಡನಹಳ್ಳಿ, ಅಂಬರಹಳ್ಳಿ, ಕನ್ನಲಿ ಮುಂತಾದ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರೆ ಈ ಅಕ್ರಮದ ಸತ್ಯಾಸತ್ಯತೆ ತಿಳಿಯುತ್ತದೆ ಎಂದು ಪತ್ರಕರ್ತರಿಗೆ ತಿಳಿಸಿದರು.
ಮದ್ದೂರು ಕೆರೆಯಲ್ಲೂ ಇದೇ ರೀತಿ ಆಗುತ್ತಿದ್ದು, ಇಂತಹ ಕಾಮಗಾರಿಗಳಲ್ಲಿ 40% ವರೆಗೆ ಕಮಿಷನ್ ಹೊಡೆಯಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.ಪ್ರಸ್ತುತ ಆಡಳಿತವು ಬಿಡುಗಡೆ ಮಾಡಿರುವ ‘ಒಂದೂವರೆ ವರ್ಷದ ಸಾಧನೆ’ಯ ಕಿರುಹೊತ್ತಿಗೆಯನ್ನು ಪ್ರದರ್ಶಿಸಿದ ತಮ್ಮಣ್ಣನವರು, ಅದರಲ್ಲಿರುವ ಬಹುತೇಕ ಯೋಜನೆಗಳು ತಮ್ಮ ಅವಧಿಯಲ್ಲಿ ಮಂಜೂರಾದವುಗಳು ಎಂದು ದಾಖಲೆ ಸಮೇತ ವಿವರಿಸಿದರು.
ಮದ್ದೂರು ತಾಲೂಕಿನ ವಿವಿಧ ರಸ್ತೆಗಳ ಅಭಿವೃದ್ಧಿ, ಚೆಕ್ ಡ್ಯಾಂ, ನಾಲಾ ಅಭಿವೃದ್ಧಿ, ಮತ್ತು ಕೆರೆಗಳ ಅಭಿವೃದ್ಧಿಗಾಗಿ ಒಟ್ಟು 474 ಕೋಟಿ ರೂ.ಗಳ ಅನುದಾನವನ್ನು ತಾನೇ ಮಂಜೂರು ಮಾಡಿಸಿದ್ದು, ಈಗಿನವರು ಅದನ್ನು ಉದ್ಘಾಟಿಸಿಕೊಂಡು ತಮ್ಮ ಸಾಧನೆ ಎನ್ನುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರಮುಖ ಯೋಜನೆಗಳ ಕುರಿತು ಸ್ಪಷ್ಟನೆ
ಪೌರಕಾರ್ಮಿಕರಿಗೆ ವಸತಿ ಗೃಹ ನಿರ್ಮಾಣಕ್ಕಾಗಿ 5.25 ಕೋಟಿ ರೂ. ಮಂಜೂರು ಮಾಡಿಸಿ, ಗುದ್ದಲಿ ಪೂಜೆ ಮಾಡಿಸಿದ್ದು ತಾನು. ಆದರೆ ಈಗ ಅದನ್ನು ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದರು. ಇಂಧನ ಇಲಾಖೆಯ 220 ಕೆವಿ ಸಬ್ ಸ್ಟೇಷನ್ ನಿರ್ಮಾಣಕ್ಕಾಗಿ ಜಾಗ ಮಂಜೂರು ಮಾಡಿಸಿ, ಬರೋಬ್ಬರಿ 187 ಕೋಟಿ ರೂ. ಅನುದಾನ ತಂದಿದ್ದು ಕೂಡ ತಾನೇ ಎಂದು ಅವರು ಸ್ಪಷ್ಟಪಡಿಸಿದರು.
ಮದ್ದೂರು ಕ್ಷೇತ್ರಕ್ಕೆ ವೀರೇಗೌಡರು, ಎಸ್.ಎಂ. ಕೃಷ್ಣ, ಮಂಚೇಗೌಡರು ಸೇರಿದಂತೆ ಅನೇಕ ನಾಯಕರ ಕೊಡುಗೆ ಇದೆ. ಆದರೆ ಈಗಿನವರು ಮಾತ್ರ ತಾವೇ ಅಭಿವೃದ್ಧಿ ಮಾಡಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಡಿ.ಸಿ. ತಮ್ಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.


