ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿರುವ ಆರೋಪಿಗೆ 20 ವರ್ಷ ಕಾರಾಗೃಹ ಶಿಕ್ಷೆ ಹಾಗೂ 7,00,000 ದಂಡವನ್ನು
ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷ ಶಿಕ್ಷೆ ಹಾಗೂ 7,00,000/- ದಂಡ ವಿಧಿಸಿ ಮಂಡ್ಯ ಅಧಿಕ ಸೆಷನ್ಸ್ ಮತ್ತು 2ನೇ ತ್ವರಿತಗತಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಬಿ.ದಿಲೀಪ್ ಕುಮಾರ್ ಅವರು ತೀರ್ಪು ನೀಡಿದ್ದಾರೆ.
ಮಂಡ್ಯ ಸಿಟಿ, 2ನೇ ಕ್ರಾಸ್, ತಾವರಗೆರೆ ಮಂಡ್ಯ ಇಲ್ಲಿ ವಾಸವಾಗಿರುವ ವಾಯಿದ್ ಇಕ್ಬಾಲ್ ರವರ ಮಗ ಅಖೀಬ್ ಆಲಂ @ ಶೇಖ್ ಅಖೀಬ್ ಆಲಂ ಶಿಕ್ಷೆಗೆ ಒಳಗಾದ ಆರೋಪಿ.
ಮಂಡ್ಯ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ ಪಿರ್ಯಾದಿಯ ಮಗಳು ಅಪ್ರಾಪ್ತ ಬಾಲಕಿ ಸೆಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾಗ, ಬಾಲಕಿ ಶಾಲೆಗೆ ಹೋಗುವಾಗ ಮತ್ತು ಬರುವಾಗ ಆಗಾಗ್ಗೆ ಹೋಗಿ ಭೇಟಿ ಮಾಡುತ್ತಾ, ಪುಸಲಾಯಿಸಿ ನಿನ್ನನ್ನು ಪ್ರೀತಿಸುತ್ತಿದ್ದು, ನೀನು ನನ್ನನ್ನು ಪ್ರೀತಿಸದೇ ಹೋದರೆ ಕೈಯನ್ನು ಕುಯ್ದುಕೊಳ್ಳುತ್ತೇನೆಂದು ಹಾಗೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೆದರಿಸಿ, ದಿನಾಂಕ 27/11/2023 ರಂದು ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗಿ ಶ್ರೀರಂಗಪಟ್ಟಣ ತಾಲ್ಲೂಕಿನ ಕರಿಘಟ್ಟಬೆಟ್ಟದ ದೇವಸ್ಥಾನದ ಹಿಂಭಾಗದಲ್ಲಿ ಕಾರನ್ನು ನಿಲ್ಲಿಸಿಕೊಂಡು, ಕಾರಿನಲ್ಲಿ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.
ನಂತರ ಈ ವಿಚಾರವನ್ನು ನಿಮ್ಮ ತಂದೆ-ತಾಯಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದು, ಇದರಿಂದ ಮನನೊಂದ ಅಪ್ರಾಪ್ತ ಬಾಲಕಿ ಮನೆಯ ಕೊಠಡಿಯಲ್ಲಿ ಫ್ಯಾನ್‌ಗೆ ವೇಲಿನಿಂದ ನೇಣು ಬಿಗಿದುಕೊಂಡು ಮೃತಪಟ್ಟಿದ್ದು, ಆರೋಪಿತನಿಂದ ಲೈಂಗಿಕ ಹಲ್ಲೆಗೆ ಒಳಗಾಗಿದ್ದ ಬಾಲಕಿಯು ಗರ್ಭಿಣಿಯಾಗಿರುವುದು ಬಾಲಕಿಯ ಶವದ ವೈದ್ಯಕೀಯ ಪರೀಕ್ಷೆ ವೇಳೆ ದೃಢಪಟ್ಟಿರುತ್ತದೆ.
ಈ ಸಂಬಂಧ ಮಂಡ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ತನಿಖಾಧಿಕಾರಿಯಾದ ಈ ಹಿಂದೆ ಇದ್ದ ಮಂಡ್ಯ ಮಹಿಳಾ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಹೆಚ್.ಆನಂದಕುಮಾರ್ ರವರು ತನಿಖೆಯನ್ನು ಕೈಗೊಂಡು, ಸೂಕ್ತ ಸಾಕ್ಷಾಧಾರಗಳನ್ನು ಸಂಗ್ರಹಿಸಿ, ನಿಗಧಿತ ಸಮಯದಲ್ಲಿ ತನಿಖೆಯನ್ನು ಪೂರ್ಣಗೊಳಿಸಿ, ಆರೋಪಿ ವಿರುದ್ಧ ಮಾನ್ಯ 2ನೇ ತ್ವರಿತಗತಿ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿರುತ್ತಾರೆ.
ಈ ಪ್ರಕರಣವು ಸ್ಪೆಷಲ್ ಕೇಸ್ ನಂ:77/2024 ರಂತೆ (ಮಂಡ್ಯ ಮಹಿಳಾ ಪೊಲೀಸ್ ಠಾಣಾ ಮೊ.ನಂ.81/2023) ಮಂಡ್ಯದ ಮಾನ್ಯ ಅಧಿಕ ಸತ್ರ ಮತ್ತು ತ್ವರಿತಗತಿ 2ನೇ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಶ್ರೀ ಬಿ.ದಿಲೀಪ್ ಕುಮಾರ್ ರವರ ಮುಂದೆ ವಿಚಾರಣೆ ನಡೆದು, ದಿನಾಂಕ 07/04/2026 ರಂದು ಆರೋಪಿ ಅಜೀಬ್ ಆಲಂ @ ಶೇಖ್ ಅಜೀಬ್ ಆಲಂ ಈತನಿಗೆ ಶಿಕ್ಷೆಯನ್ನು ಪ್ರಕಟಿಸಿ ತೀರ್ಪು ನೀಡಿರುತ್ತಾರೆ.
ಅಭಿಯೋಜನೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಶ್ರೀ ಹೆಬ್ಬಕವಾಡಿ ನಾಗರಾಜು ರವರು ವಾದ ಮಂಡಿಸಿದ್ದರು.


