Thursday, October 15, 2026
spot_img

ಮೈಶುಗರ್ ಲೂಟಿ ಇನ್ನೆಷ್ಟು ದಿನ ?

ಮೈಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿರುವ ಹಗರಣಗಳು ಅಥವಾ ಇನ್ನು ಸರಳವಾಗಿ ಹೇಳೊದಾದ್ರೆ ಅವ್ಯವಹಾರಗಳ ಕುರಿತು ಸ್ವತಃ ರಾಜ್ಯ ಸರಕಾರವೇ ಮಹಾರಾಷ್ಟ್ರದ ನಿವೃತ್ತ ಸಕ್ಕರೆ ಆಯುಕ್ತ ಗಾಯಕ್ ವಾಡ್ ನೇತೃತ್ವದ ತನಿಖಾ ಸಮಿತಿ ರಚಿಸಿತು.ಸಮಿತಿ ಅಳೆದು ಸುರಿದು ಎಲ್ಲವನ್ನು ತನಿಖೆ ಮಾಡಿ ಆರೋಪಿಸಿದ್ದ ಹದಿಮೂರು ಅಂಶಗಳಲ್ಲಿ ಹನ್ನೊಂದು ಆರೋಪಗಳಲ್ಲಿ ಹುರುಳಿರುವುದನ್ನು ಒಪ್ಪಿ ಹಗರಣ ನಡೆದಿರುವುದು ಸಾಬೀತಾಗಿದೆ ಎಂದು ವರದಿ ನೀಡಿದೆ.

ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಯ ಹಿತದೃಷ್ಟಿಯಿಂದ ಇಷ್ಟೋತ್ತಿಗೆ ಹಗರಣದ ಕಾರಣಕರ್ತರಾದ ಮೈಶುಗರ್ ಅಧ್ಯಕ್ಷ ಸಿ.ಡಿ ಗಂಗಾಧರ್. ಎಂ.ಡಿ ಮಂಗಲ್ ದಾಸ್ ತಲೆದಂಡವಾಗಬೇಕಿತ್ತು.

ತನಿಖಾ ವರದಿ ಮೇಲೆ ಕ್ರಮವಾಗಬೇಕಿತ್ತು.ಆದರೆ ಅದ್ಯಾವುದು ನಡೆಯಲೇ‌ಇಲ್ಲ.ಬದಲಿಗೆ ಮೈಶುಗರ್ ಬಹುಕೋಟಿ ಅಕ್ರಮಗಳ ಪಿತಾಮಹರನ್ನು ಮುಂದಿಟ್ಟುಕೊಂಡೆ ಉಸ್ತುವಾರಿಗಳು ೬೦ ಕೋಟಿ ರೂಪಾಯಿಗಳ ಬಾಯ್ಲಿಂಗ್ ಹೌಸ್ ಘಟಕದ ಟೆಂಡರ್ ನಡೆಸುತ್ತಾರೆ.

ಮೈಶುಗರ್ ನಂತಹ ಸಾರ್ವಜನಿಕ ಉದ್ಯಮವನ್ನು ಕಣ್ಣೇದುರೆ ನೆಲ ಕಚ್ಚಿಸುತ್ತಿದ್ದರೂ..ರೈತ ಹೋರಾಟಗಾರರ ಹೋರಾಟವನ್ನು ಅಂಡಿಗೆ ಹಾಕಿಕೊಂಡು ಎಲ್ಲವನ್ನು ಮ್ಯಾನೇಜು ಮಾಡುವ ಕೆಲಸ ನಡೀತಿದೆ.

ಮನ್ ಮುಲ್ ನಲ್ಲಿ ಹಾಲಿನ ಪುಡಿ ಹಗರಣವೂ ಇಷ್ಟೋತ್ತಿಗೆ ಜನರ ನೆನಪಿನಿಂದ ಮಾಸು ಹೋಗುತ್ತಿತ್ತು.
ಆದರೆ ಮೀಡಿಯಾಗಳ ಕಣ್ಗಾವಲು ಜನಪರ ಸಂಘಟನೆಗಳ ಹೋರಾಟ ಒಂದಿಷ್ಟು ಮಂದಿಯನ್ನಾದರೂ ಕಂಬಿಗಳ ಹಿಂದೆ ನಿಲ್ಲಿಸಿದೆ.

ಆದರೆ ಆರೋಪ ಪಟ್ಟಿಯಲ್ಲಿ ಪೋಲಿಸರು ಯಾವ ಮಟ್ಟಿಗೆ ಸಿದ್ದಪಡಿಸುತ್ತಾರೆಂಬುದರ ಮೇಲೆ ಈ ಪ್ರಕರಣದ ಭವಿಷ್ಯವಿದೆ.ಇದು ಸಹ ನೀರು ಹಾಲಿನಂತೆ.ಮೆಗಾಡೈರಿಯಂತೆ ಹಳ್ಳ ಹಿಡಿಯಲಿದೆಯೋ ನೋಡಬೇಕು.

ಕಾಂಗ್ರೆಸ್ ಆಡಳಿತದಲ್ಲಿ ಜಿಲ್ಲೆಯ ಸಾರ್ವಜನಿಕ ಉದ್ದಿಮೆಗಳನ್ನು ವ್ಯವಸ್ಥಿತವಾಗಿ ನೆಲ ಕಚ್ಚಿಸಲಾಗುತ್ತಿದೆ.ಕಡೇಗೆ ರೈತರ ಮೇಲೆ ಹೊಣೆಗಾರಿಕೆ ಹಾಕಿ ತಾವು ಪಲಾಯನ ಮಾಡುವ ಇಲ್ಲಿನ ರಾಜಕಾರಣ ಎಲ್ಲರಿಗೂ ತಿಳಿದೆಯಿದೆ.

ಮೈಶುಗರ್ ಲೂಟಿ ಹೊಡೆದ ಈ ಹಿಂದಿನ ಅಧ್ಯಕ್ಷ ನಾಗರಾಜಪ್ಪ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಸ್ವತಃ ಹೈಕೋರ್ಟ್ ಆದೇಶಿಸಿದರೂ ಯಾವುದೆ ಕ್ರಮವಿಲ್ಲ.ಬಿ ಮಿಲ್ ಮಾರಾಟದಲ್ಲಿ ನೇರಾ ನೇರಾ ಅಕ್ರಮ ಎಸಗಿ ಹದಿನಾರು ಕೋಟಿ ಬೆಲೆ ಬಾಳುವ ಯಂತ್ರಗಳು ಅಮುಲ್ಯ ವಸ್ತುಗಳನ್ನು ನಾಲ್ಕು ಕೋಟಿ ಹತ್ತು‌ ಲಕ್ಷಕ್ಕೆ ಮಾರಾಟ ಮಾಡಿ ಕಾರ್ಖಾನೆಯನ್ನು ಸೂರೆ ಹೊಡೆಯಲಾಗಿದೆ.ಬರೇ ಬೋರ್ಡು ನಿರ್ಣಯದ ಮೇಲೆ ಬಿ ಮಿಲ್ ಮಾರಾಟ ಮಾಡಿದ್ದು ಸರಕಾರದ ಅನುಮತಿಯೆ ಪಡೆದಿಲ್ಲ.ಈ ಸಂಬಂದ ದೂರುಗಳು ದಾಖಲಾಗುತ್ತಿದ್ದಂತೆ ವಾಣಿಜ್ಯ ಮತ್ತು‌ ಕೈಗಾರಿಕೆ ಇಲಾಖೆ ಮಂಡ್ಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದೆ.

ಆದರೆ ತನಿಖೆಗೆ ಸಹಕಾರ ಕೊಡದೆ ಮೈಶುಗರ್ ಅಧ್ಯಕ್ಷ ಹಾಗೂ ಎಂಡಿ ಮೊಂಡಾಟ ಮುಂದುವರಿಸಿದ್ದಾರೆ.ತನಿಖೆಯ ಕತೆ ಏನಾಯಿತೋ ಸಾರ್ವಜನಿಕರಿಗೆ ಒಂದಿನಿತೂ ಮಾಹಿತಿಯಿಲ್ಲ.
ಈ ರೀತಿಯ ಗಂಭೀರ ಆರೋಪ ಎದುರಿಸುತ್ತಿರುವ ಮೈಶುಗರ್ ಅಧ್ಯಕ್ಷರನ್ನು ಬಗಲಲ್ಲಿರಿಸಿಕೊಂಡು ಉಸ್ತುವಾರಿ ಸಚಿವರು ಜಿಲ್ಲೆಗೆ ಯಾವ ಸಂದೇಶ ನೀಡುತ್ತಿದ್ದಾರೆ? ಜಿಲ್ಲಾಧಿಕಾರಿಗಳು ಅಗತ್ಯ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸುವುದು ಇವತ್ತಿನ ಜರೂರಾಗಿದೆ.

ಇದರ ನಡುವೆ ನೇರ ಕನ್ನಂಬಾಡಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ೬ ನೇ ಹಂತದ ಜಾರಿಗೆ ರೈತರ ವಿರೋಧದ ನಡುವೆ ಪ್ರಯತ್ನ ಸಾಗಿದೆ.

ಇದಲ್ಲದೆ ಉತ್ತರ ಭಾರತದ ಗಂಗಾರತಿ ಮಾದರಿಯಲ್ಲಿ ಕೆ ಆರ್ ಎಸ್ ನಲ್ಲಿ‌ ಕಾವೇರಿ ಆರತಿ ಎಂಬ ಉತ್ತರ ಭಾರತದ ಅಂಧಾನುಕರಣೆ ಆರಂಭವಾಗಿದೆ.

ಸ್ವತಃ ಹೈಕೋರ್ಟ್ ಇದ್ಯಾವುದು ಮಾಡದಂತೆ ತಡೆಯಾಜ್ಞೆ ನೀಡಿದರೂ ಹಿಂಭಾಗಿಲಿನಿಂದ ಕಾವೇರಿ ಆರತಿ ಮಾಡಲಾಗುತ್ತಿದೆ.ಇದಕ್ಕಾಗಿ ಫೋರ್ ಜಿ ಹೆಸರಿನಲ್ಲಿ ಕೋಟಿ ಗಟ್ಟಲೆ ಹಣ ಬಿಡುಗಡೆ ಮಾಡಿ ಇದರ ಹೆಸರಿನಲ್ಲಿ ಸಾರ್ವಜನಿಕ ಹಣದ ಲೂಟಿ ಆರಂಭವಾಗಿದೆ.

ಯಾವುದೆ ಟೆಂಡರ್ ಇಲ್ಲದೆ ಮನಸೋಇಚ್ಚೇ ನಡೆಯುವ ಈ ಕಾಮಗಾರಿ ಗಳು ಹಗಲು ದರೋಡೆಯೆ ಸರಿ.ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಹಬ್ಬದೂಟವೆ ಸರಿ.

ಮೂರುವರೆ ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ಸರಕಾರ ಜಿಲ್ಲೆಯ ಜನರನ್ನು ಭಿಕ್ಷಾಟನೆಗೆ ದೂಡುವಂತೆ ಮಾಡಿದೆ.ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ನಿರಂತರ ಹಿನ್ನಡೆ. ಬರ.ಕೆರೆ ಕಟ್ಟೆ ತುಂಬಿಸದೆ ಕಾಮಗಾರಿಗಳ ಕಮೀಷನ್ ಮೇಲೆ ಕಣ್ಣಿಟ್ಟು ಕೂತಿರುವ ಜನಪ್ರತಿನಿಧಿಗಳು ಅಧಿಕಾರಿಗಳು ಜಿಲ್ಲೆಯ ಜನರನ್ನು ಹೈರಾಣಾಗಿಸಿದ್ದಾರೆ.

ಬಲವಾದ ರೈತ ಹೋರಾಟಗಳ ಕೊರತೆಯೂ ಸಹ ಏನು ಮಾಡಿದರೂ ಅರಗಿಸಿಕೊಳ್ಳಬಲ್ಲೆವು ಎಂಬ ಅಹಂನ್ನು ಅಧಿಕಾರ ವರ್ಗಕ್ಕೆ ತಂದು ಕೊಟ್ಟಿದೆ.

ಮಾಧ್ಯಮ ಕೇಂದ್ರೀತ ವ್ಯಕ್ತಿ ಆಧಾರಿತ ಹೋರಾಟಗಳು ಸಾಂಕೇತಿಕ ಪ್ರತಿರೋಧಕ್ಕೆ ಸಿಮೀತವಾಗಿ ಆಳುವ ಸರಕಾರಕ್ಕೆ ಯಾವುದೆ ಆಳುಕು ಮುಡಿಸುತ್ತಿಲ್ಲ.ಎಲ್ಲವನ್ನು ಯಶಸ್ವಿಯಾಗಿ ನಿಭಾಯಿಸಬಲ್ಲ ಕಲೆಯೊಂದು ಆಡಳಿತ ವರ್ಗಕ್ಕೆ ಸಿದ್ದಿಸಿದೆ.

ಬೆಳಗೊಳ ಪೇಪರ್ ಮಿಲ್. ಅಸಿಟೇಟ್ ಕಾರ್ಖಾನೆ.ಕಳೆದು ಹೋದಂತೆ ಮೈಶುಗರ್ ಮನ್ ಮುಲ್ ಕಳೆಯುವ ಮುನ್ನಾ ಜಿಲ್ಲೆಯ ಜನರು ಎಚ್ಚೆತ್ತುಕೊಳ್ಳಬೇಕಿದೆ.
ಇಲ್ಲದಿದ್ದರೆ ಜಿಲ್ಲೆಯ ಜನರಿಗೆ ಬೆಂಗಳೂರಿನಲ್ಲಿ ಆಟೋ ಚಾಲಕರಾಗಿಯೋ..ಹೋಟೆಲ್ ಬಾರುಗಳ ಸಪ್ಲೈರುಗಳಾಗಿಯೋ..ಸೆಕ್ಯೂರಿಟಿಯಾಗಿಯೋ ಕಾಲ ದೂಡುವಂತೆ ಮಾಡುವ ಅವಕಾಶಗಳು ನಿಚ್ಚಳವಾಗಿವೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!