*ಡೇರಿಗಳನ್ನು ರಾಜಕೀಯಕ್ಕೆ ಎಳೆದು ತಂದವರು ಯಾರು?*
*ಶಾಸಕ ಎಚ್.ಟಿ.ಮಂಜು ವಿರುದ್ಧ ಡಾಲು ರವಿ ವಾಗ್ದಾಳಿ*.
*ಭ್ರಷ್ಟಾಚಾರದ ಆರೋಪ, ಹಾಲಿನ ಪುಡಿ ಹಗರಣದ ಸವಾಲು*.
*ನಿಮ್ಮನ್ನು ಮನೆಗೆ ಕಳುಹಿಸುವವರೆಗೂ ವಿರಮಿಸಲ್ಲ*.
*ಹಾಲಿನ ಪುಡಿ ಹಗರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾದರೆ ರಾಜೀನಾಮೆ ನೀಡುತ್ತೇನೆ*.
ಕೆ.ಆರ್.ಪೇಟೆ
ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ರಾಜಕೀಯ ವಿವಾದಕ್ಕೆ ಎಳೆದು ತಂದವರು ಯಾರು? ನಾವು ತಾಲೂಕಿನ ಯಾವುದೇ ಡೇರಿಗೆ ಅನ್ಯಾಯ ಮಾಡಿಲ್ಲ. ಅನ್ಯಾಯವಾಗಿದ್ದರೆ ದಾಖಲೆಗಳ ಸಹಿತ ಸಾಬೀತುಪಡಿಸಿ. ಕೇವಲ ಕಾಟಾಚಾರಕ್ಕೆ ಮಾತನಾಡಬೇಡಿ ಎಂದು ಶಾಸಕ ಎಚ್.ಟಿ.ಮಂಜು ವಿರುದ್ಧ ಮನ್ಮುಲ್ ನಿರ್ದೇಶಕ ಡಾಲು ರವಿ ತೀವ್ರ ವಾಗ್ದಾಳಿ ನಡೆಸಿದರು.
ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮನ್ಮುಲ್ ನಿರ್ದೇಶಕ ಡಾಲು ರವಿ ಹಾಗೂ ಎಂ.ಬಿ.ಹರೀಶ್ ಆಯೋಜಿಸಿದ್ದ ಹಾಲು ಉತ್ಪಾದಕರ ಸಭೆಯಲ್ಲಿ ಹಿಂದೆ ಜೆಡಿಎಸ್ ಪ್ರತಿಭಟನೆಯಲ್ಲಿ ಆರೋಪಿಸಿದ್ದ ವಿಚಾರಗಳಿಗೆ ಪ್ರಸ್ತಾಪಿಸಿ ಮಾತನಾಡಿದರು.
ಹಿಂದೆ ಎಲ್ಲರೂ ಸೌಹಾರ್ದತೆಯಿಂದ ಕೆಲಸ ಮಾಡಿರಲಿಲ್ಲವೇ? ತಾಲೂಕಿನ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳು ಹಿಂದೆ ಸೌಹಾರ್ದತೆಯಿಂದ ಕಾರ್ಯನಿರ್ವಹಿಸುತ್ತಿದ್ದವು. ಆಗ ಡೇರಿಗಳ ವಿಚಾರದಲ್ಲಿ ಇಷ್ಟೊಂದು ರಾಜಕೀಯ ಸಂಘರ್ಷಗಳಿರಲಿಲ್ಲ. ನಾನು ಕಾಂಗ್ರೆಸ್ನಿಂದ, ನೀವು ಜೆಡಿಎಸ್ನಿಂದ ನಿರ್ದೇಶಕರಾಗಿದ್ದಾಗ ಯಾವ ಊರಿನ ಡೇರಿಯಲ್ಲಿ ಇಂತಹ ಸಮಸ್ಯೆ ಉಂಟಾಗಿತ್ತು? ಆಗಲೂ ಕ್ಷೇತ್ರದಲ್ಲಿ ಶಾಸಕರಿರಲಿಲ್ಲವೇ? ಅವರು ನಿಮ್ಮಂತೆಯೇ ವರ್ತಿಸುತ್ತಿದ್ದರೇ ಎಂದು ಡಾಲು ರವಿ ಪ್ರಶ್ನಿಸಿದರು.
ಡೇರಿಗಳಲ್ಲಿ ಸಮಸ್ಯೆಗಳಿದ್ದರೆ ಅವುಗಳನ್ನು ಮಾತುಕತೆ ಮೂಲಕ ಬಗೆಹರಿಸಿ ಕೊಳ್ಳಬೇಕು. ಹಾಲು ಉತ್ಪಾದಕರು ಮತ್ತು ಸಹಕಾರ ಸಂಘಗಳ ಹಿತಾಸಕ್ತಿಯನ್ನು ಕಾಪಾಡುವುದು ಮುಖ್ಯವಾಗಬೇಕು. ಆದರೆ *ಡೇರಿಗಳ ವಿಚಾರವನ್ನು ರಾಜಕೀಯ ಸಂಘರ್ಷಕ್ಕೆ ಬಳಸಿಕೊಳ್ಳುತ್ತಿರುವುದರ ಹಿಂದಿನ ಉದ್ದೇಶವೇನು ಎಂಬುದನ್ನು ಶಾಸಕರು ಸ್ಪಷ್ಟಪಡಿಸಬೇಕು. ನಿಮ್ಮ ಹತಾಶೆ ನನಗೆ ಅರ್ಥವಾಗುತ್ತಿದೆ. ಮುಂಬರುವ ಚುನಾವಣೆಯಲ್ಲಿ ನೀವು ಮನೆಗೆ ಹೋಗುವುದು ಗ್ಯಾರಂಟಿ ಎಂದು ಶಾಸಕ ಎಚ್.ಟಿ.ಮಂಜು ವಿರುದ್ಧ ವಾಗ್ದಾಳಿ ನಡೆಸಿದರು*.
ತಾಲೂಕು ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವ: ಆರೋಪ
*ಶಾಸಕರ ಅಧಿಕಾರದ ಅವಧಿಯಲ್ಲಿ ತಾಲೂಕಿನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ*.
*ತಾಲೂಕು ಕಛೇರಿ ಹಾಗೂ ತಾಲೂಕು ಪಂಚಾಯಿತಿ, ಪುರಸಭಾ ಕಛೇರಿಗಳಲ್ಲಿ ಮಧ್ಯವರ್ತಿಗಳನ್ನು ಇಟ್ಟುಕೊಂಡು ಭ್ರಷ್ಟಾಚಾರ ನಡೆಸಲಾಗುತ್ತಿದೆ* . *ಇಂತಹ ವಿಚಾರಗಳನ್ನು ಪ್ರಶ್ನಿಸುವುದು ತಪ್ಪೇ?* ಸಾರ್ವಜನಿಕರ ಕೆಲಸಗಳು ಸುಗಮವಾಗಿ ನಡೆಯಬೇಕು. *ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಪ್ರಶ್ನಿಸಿದರೆ ರಾಜಕೀಯವಾಗಿ ಗುರಿಯಾಗಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ*.
ಮಾಜಿ ಸಚಿವ ನಾರಾಯಣಗೌಡ ಅವರ ಅವಧಿಯಲ್ಲಿ ಕ್ಷೇತ್ರಕ್ಕೆ ತಂದ ಅನುದಾನದಲ್ಲಿ ಕಮಿಷನ್ ಪಡೆದು ಜೇಬಿಗೆ ಹಾಕಿಕೊಂಡ ರೀತಿಯಲ್ಲಿ ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ.
196 ಡೇರಿಗಳ ವಾರ್ಷಿಕ ಸಭೆಗಳಲ್ಲಿ ಭಾಗವಹಿಸಿದ್ದೇವೆ
ನಾನು ಜನರ ಮಧ್ಯೆಯಿದ್ದುಕೊಂಡು ಸೇವೆ ಮಾಡುತ್ತಿದ್ದೇನೆ. ತಾಲೂಕಿನ 196 ಹಾಲು ಉತ್ಪಾದಕರ ಸಹಕಾರ ಸಂಘಗಳ ವಾರ್ಷಿಕ ಸಭೆಗಳಲ್ಲಿ ಹರೀಶ್ ಅವರೊಂದಿಗೆ ಪಾಲ್ಗೊಂಡು, ಹಾಲು ಉತ್ಪಾದಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸಿದ್ದೇವೆ. ಯಾವ ಡೇರಿಯನ್ನೂ ಒಡೆಯುವ ಕೆಲಸ ಮಾಡಿಲ್ಲ ಎಂದು ಡಾಲು ರವಿ ಸ್ಪಷ್ಟಪಡಿಸಿದ್ದಾರೆ.
ಹಾಲು ಉತ್ಪಾದಕರ ಸಹಕಾರ ಸಂಘಗಳು ಗ್ರಾಮೀಣ ರೈತರ ಜೀವನೋಪಾಯದ ಪ್ರಮುಖ ಭಾಗವಾಗಿವೆ. ರೈತರು ಉತ್ಪಾದಿಸುವ ಹಾಲಿಗೆ ಸೂಕ್ತ ಬೆಲೆ ದೊರೆಯುವುದು, ಪಾವತಿ ಸಕಾಲದಲ್ಲಿ ಆಗುವುದು ಹಾಗೂ ಸಂಘಗಳ ಆಡಳಿತದಲ್ಲಿ ಪಾರದರ್ಶಕತೆ ಇರುವುದೇ ಮುಖ್ಯವಾಗಬೇಕು. ಇಂತಹ ಸಂಘಗಳ ವಿಚಾರದಲ್ಲಿ ರಾಜಕೀಯ ಸಂಘರ್ಷ ಹೆಚ್ಚಾದರೆ ಅದರ ಪರಿಣಾಮ ಹಾಲು ಉತ್ಪಾದಕರ ಮೇಲೆ ಬೀಳಲಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದರು.
*ಯಾವುದೇ ಡೇರಿಗೆ ಅನ್ಯಾಯವಾಗಿದ್ದರೆ ನಿರ್ದಿಷ್ಟವಾಗಿ ಆ ಸಂಘದ ಹೆಸರನ್ನು ಉಲ್ಲೇಖಿಸಿ, ಏನು ಅನ್ಯಾಯವಾಗಿದೆ ಎಂಬುದನ್ನು ಸಾಬೀತುಪಡಿಸಲಿ. ಆಧಾರ ರಹಿತ ಆರೋಪಗಳಿಂದ ಹಾಲು ಉತ್ಪಾದಕರಲ್ಲಿ ಗೊಂದಲ ಸೃಷ್ಟಿಸಬಾರದು ಎಂದು ಅವರು ಸವಾಲು ಹಾಕಿದರು*.
ಹಾಲಿನ ಪುಡಿ ಹಗರಣದಲ್ಲಿ ತಪ್ಪಿತಸ್ಥರಾದರೆ ರಾಜೀನಾಮೆ
ಹಾಲಿನ ಪುಡಿ ಹಗರಣದಲ್ಲಿ ನಾನು ತಪ್ಪಿತಸ್ಥ ಎಂಬುದನ್ನು ಸಾಬೀತುಪಡಿಸಿದರೆ ಒಂದು ಕ್ಷಣವೂ ಆಡಳಿತದಲ್ಲಿ ಮುಂದುವರಿಯುವುದಿಲ್ಲ. ರಾಜೀನಾಮೆ ನೀಡಿ ಹೊರಬರುತ್ತೇನೆ ಎಂದು ಘೋಷಿಸಿದ್ದಾರೆ.
*ನನ್ನ ವಿರುದ್ಧ ಆರೋಪ ಮಾಡುವವರು ಅವುಗಳಿಗೆ ಪೂರಕವಾದ ದಾಖಲೆಗಳನ್ನು ಬಹಿರಂಗಪಡಿಸಬೇಕು. ಆರೋಪಗಳ ಆಧಾರದಲ್ಲಿ ವ್ಯಕ್ತಿಯ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡಬಾರದು. ಪ್ರಕರಣದಲ್ಲಿ ನನ್ನ ಪಾತ್ರವಿದೆ ಎಂಬುದು ಸಾಬೀತಾದರೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಅವರು ಸವಾಲು ಹಾಕಿದ್ದಾರೆ*.
*ನಿಮ್ಮ ಕಾಲದಲ್ಲಿ ಹಾಲು-ನೀರು ಹಗರಣ ನಡೆದಿರಲಿಲ್ಲವೇ? ಆ ಪ್ರಕರಣದ ಸಿಐಡಿ ತನಿಖೆ ಈಗಲೂ ನಡೆಯುತ್ತಿದೆಯಲ್ಲ, ಅದಕ್ಕೆ ಏನು ಉತ್ತರ ಕೊಡುತ್ತೀರಿ ಎಂದು ಶಾಸಕ ಎಚ್.ಟಿ.ಮಂಜು ಅವರನ್ನು ಪ್ರಶ್ನಿಸಿದ್ದಾರೆ*.
ಪಕ್ಷದ ಮುಖಂಡರನ್ನು ವೈಯಕ್ತಿಕ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದೀರಾ?
ಕೆಲವು ಪುಂಡ ಹುಡುಗರನ್ನು ಇಟ್ಟುಕೊಂಡು ನನ್ನ ತೇಜೋವಧೆ ಮಾಡಿಸಲಾಗುತ್ತಿದೆ. ಇದನ್ನು ಸವಾಲಾಗಿ ಸ್ವೀಕರಿಸಿದ್ದೇನೆ.
ಜೆಡಿಎಸ್ ತಾಲೂಕು ಅಧ್ಯಕ್ಷ, ರೈತ ಮೋರ್ಚಾ ಅಧ್ಯಕ್ಷ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ಬದಲು ವೈಯಕ್ತಿಕ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು.
ಪಕ್ಷದ ಸಂಘಟನೆಗಾಗಿ ದುಡಿಯಬೇಕಾದ ಮುಖಂಡರು ಹಾಗೂ ಕಾರ್ಯಕರ್ತರನ್ನು ವೈಯಕ್ತಿಕ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುವುದು ಸರಿಯಲ್ಲ. ಇವರೆಲ್ಲರೂ ಪಕ್ಷ ಕಟ್ಟುತ್ತಿದ್ದಾರೆಯೇ ಅಥವಾ ನಿಮ್ಮ ಮನೆ ಕೆಲಸ ಮಾಡುತ್ತಿದ್ದಾರೆಯೇ ಎಂದು ಶಾಸಕರನ್ನು ಪ್ರಶ್ನಿಸಿದ್ದಾರೆ.
‘ *ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ’ ನಾನು ಜೆಡಿಎಸ್ನಲ್ಲಿದ್ದೇನೆ. ಯಾವುದೇ ಕಾರಣಕ್ಕೂ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಯಾರೂ ಕನಸು ಕಾಣಬೇಡಿ ಎಂದು ಡಾಲು ರವಿ ಸ್ಪಷ್ಟಪಡಿಸಿದ್ದಾರೆ*.
ತಾಲೂಕಿನಲ್ಲಿ ಸಾವಿರಾರು ಹಾಲು ಉತ್ಪಾದಕ ಕುಟುಂಬಗಳಿವೆ. ಪ್ರತಿಯೊಂದು ಕುಟುಂಬವೂ ನನ್ನ ಕುಟುಂಬವಿದ್ದಂತೆ. ಅವರಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ. ಹಾಲು ಉತ್ಪಾದಕರ ಹಿತಾಸಕ್ತಿಯ ವಿಚಾರದಲ್ಲಿ ಯಾವುದೇ ರಾಜಕೀಯ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ. ಹಾಲು ಉತ್ಪಾದಕರ ಸಮಸ್ಯೆಗಳನ್ನು ಆಲಿಸುವುದು, ಸಹಕಾರ ಸಂಘಗಳ ಹಿತ ಕಾಪಾಡುವುದು ಹಾಗೂ ರೈತರಿಗೆ ನ್ಯಾಯ ದೊರಕಿಸಿಕೊಡುವುದು ತಮ್ಮ ಆದ್ಯತೆಯಾಗಿದೆ ಎಂದು ಹೇಳಿದರು.
‘ *ಅಖಾಡ ಸಿದ್ಧವಾಗಿದೆ, ಬನ್ನಿ ಸೆಣಸಾಡೋಣ*’
*ನಿಮ್ಮ ರಾಜಕೀಯ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ* . *ನಿಮ್ಮನ್ನು ಮನೆಗೆ ಕಳುಹಿಸುವವರೆಗೂ ವಿರಮಿಸುವುದಿಲ್ಲ*. *ನಿಮ್ಮ ಬೆಂಬಲಿಗರನ್ನು ಹತೋಟಿಯಲ್ಲಿಟ್ಟುಕೊಳ್ಳಿ. ಅಖಾಡ ಸಿದ್ಧವಾಗಿದೆ*, *ಬನ್ನಿ ಸೆಣಸಾಡೋಣ ಎಂದು ಶಾಸಕ ಎಚ್.ಟಿ.ಮಂಜು ಅವರಿಗೆ ಡಾಲು ರವಿ ನೇರ ಸವಾಲು ಹಾಕಿದ್ದಾರೆ*.
ನನ್ನ ವಿರುದ್ಧ ಆರೋಪಗಳನ್ನು ಮಾಡಲು ಇತರರನ್ನು ಮುಂದೆ ಬಿಡುವುದೇಕೆ? ನಿಮ್ಮ ಬೆಂಬಲಿಗರನ್ನು ನನ್ನ ವಿರುದ್ಧ ಬಳಸಿಕೊಳ್ಳುವ ಬದಲು ನೀವೇ ನೇರವಾಗಿ ಎದುರಿಸಿ ಎಂದು ಡಾಲು ರವಿ ಅವರು ವಾಗ್ದಾಳಿ ನಡೆಸಿದ್ದಾರೆ.
ಮನ್ಮುಲ್ ನಿರ್ದೇಶಕ ಎಂ.ಬಿ.ಹರೀಶ್ ಮಾತನಾಡಿ, ಹಾಲು ಉತ್ಪಾದಕರಿಗೆ ಅನ್ಯಾಯವಾಗಿದೆ ಎಂದು ಪ್ರತಿಭಟನೆ ನಡೆಸಿದ ಜೆಡಿಎಸ್ ಮುಖಂಡರು, ಉತ್ಪಾದಕರ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಡಾಲು ರವಿ ಅವರನ್ನು ಟೀಕಿಸುವುದರಲ್ಲೇ ನಿರತರಾಗಿದ್ದೇಕೆ? ಡಾಲು ರವಿ ಅವರನ್ನು ಟೀಕಿಸುವುದೇ ನಿಮ್ಮ ಉದ್ದೇಶವಾಗಿದ್ದರೆ ಖಾಸಗಿ ವೇದಿಕೆಯಲ್ಲಿ ಟೀಕಿಸಬಹುದಿತ್ತಲ್ಲವೇ? ಅದಕ್ಕೆ ಮನ್ಮುಲ್ ಶಿಥಲೀಕರಣ ಕೇಂದ್ರವನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಶಾಸಕ ಎಚ್.ಟಿ.ಮಂಜು ಹಾಗೂ ಜೆಡಿಎಸ್ ಮುಖಂಡರನ್ನು ಪ್ರಶ್ನಿಸಿದರು.
*ಹಾಲಿನ ಪುಡಿ ಕಲಬೆರಕೆಯಲ್ಲಿ ನಮ್ಮ ಪಾತ್ರವಿಲ್ಲ*: ಹಾಲಿನ ಪುಡಿ ಕಲಬೆರಕೆ ಪ್ರಕರಣದಲ್ಲಿ ನನ್ನ ಹಾಗೂ ಡಾಲು ರವಿ ಅವರ ಪಾತ್ರವಿದೆ ಎಂದು ಆರೋಪಿಸುವವರಿಗೆ ಸವಾಲು ಹಾಕುತ್ತೇನೆ. *ನನ್ನ ಮಕ್ಕಳಾಣೆಗೂ ಈ ಪ್ರಕರಣದಲ್ಲಿ ನಮ್ಮ ಪಾತ್ರವಿಲ್ಲ ಎಂದು ಹರೀಶ್ ಖಾರವಾಗಿ ಸ್ಪಷ್ಟಪಡಿಸಿದರು*.
ಪತ್ರಿಕಾಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಪಿ.ಲೋಕೇಶ್, ಬ್ಯಾಂಕ್ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿಗೌಡ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ರಾಮೇಗೌಡ, ಹಾದನೂರು ಪರಮೇಶ್, ಅಗ್ರಹಾರ ಬಾಚಹಳ್ಳಿ ನಾಗೇಶ್, ಸಾಧುಗೋನಹಳ್ಳಿ ಲೋಕೇಶ್ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚಿನ ಡಾಲು ರವಿ ಬೆಂಬಲಿಗರು ಭಾಗವಹಿಸಿದ್ದರು.


