**ಮದ್ದೂರು ಕೊಲೆ ಪ್ರಕರಣ ಭೇದಿಸಿದ ಪೊಲೀಸರು: ನಂದನ್ ಹತ್ಯೆ ಆರೋಪದಲ್ಲಿ ನಾಲ್ವರ ಬಂಧನ**
*ಮಂಡ್ಯ:* ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಂದನ್ ಎಂಬವರ ಕೊಲೆ ಪ್ರಕರಣವನ್ನು ಹತ್ತು ಗಂಟೆಗಳೊಳಗೆ ಭೇದಿಸಿರುವ ಪೊಲೀಸರು, ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.
ನವೆಂಬರ್ 2ರ ಸಂಜೆ ಸುಮಾರು 7.40ಕ್ಕೆ ಟೈಲ್ಸ್ ಕೆಲಸದ ವಿಚಾರವಾಗಿ ಗಲಾಟೆ ನಡೆದು, ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಲಾಗಿತ್ತು. ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ನಂದನ್ ಅವರಿಗೆ ಚಾಕುವಿನಿಂದ ಇರಿಯಲಾಗಿತ್ತು. ತೀವ್ರವಾಗಿ ಗಾಯಗೊಂಡ ಅವರನ್ನು ಮದ್ದೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಮೃತಪಟ್ಟರು.
ನಂದನ್ ಅವರ ತಾಯಿ ನೀಡಿದ ದೂರಿನ ಮೇರೆಗೆ ಮದ್ದೂರು ಠಾಣೆಯಲ್ಲಿ ಮೊ.ನಂ. 363/2026ರಡಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಕಲಂ 352, 118(1), 115(2), 351(2), 103(1) ಹಾಗೂ 3(5) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.
ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಶೋಭಾರಾಣಿ ವಿ.ಜೆ., ಐಪಿಎಸ್ ಅವರ ನಿರ್ದೇಶನದಂತೆ, ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕ ನಾಗೇಶ್ ಎಲ್. ಹಾಗೂ ಮಳವಳ್ಳಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಯಶವಂತಕುಮಾರ್ ಎಸ್.ಬಿ. ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಮದ್ದೂರು ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ನವೀನ್ ಹೆಚ್.ಎಸ್., ಪಿಎಸ್ಐ ರಸೂಲ್ ಸಾಬ್ ಗೌಂಡಿ, ಎಎಸ್ಐ ಶ್ರೀನಿವಾಸಾಚಾರಿ ಹಾಗೂ ಸಿಬ್ಬಂದಿಗಳಾದ ಆನಂದ್, ಪ್ರಶಾಂತ್, ಮಹೇಶ್, ಮಹದೇವ, ಶಿವರಾಜು, ಕೆಂಚಾಚಾರಿ, ಸಿದ್ದೇಗೌಡ, ಮಹದೇವಸ್ವಾಮಿ, ಚಿರಂಜೀವಿ, ಶರತ್, ಮಂಜುನಾಥ, ರವಿ, ಲೋಕೇಶ್ ಹಾಗೂ ರವಿಕಿರಣ್ ತಂಡದಲ್ಲಿದ್ದರು.
ತಂಡವು ನವೆಂಬರ್ 3ರ ಬೆಳಿಗ್ಗೆ 6 ಗಂಟೆಗೆ ಮದ್ದೂರು ಪಟ್ಟಣದಲ್ಲಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ದಸ್ತಗಿರಿ ಮಾಡಿದೆ.
ಪ್ರಕರಣವನ್ನು ತ್ವರಿತವಾಗಿ ಭೇದಿಸಿದ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


