Monday, October 19, 2026
spot_img

ಇನ್ಮುಂದೆ ವೈದ್ಯರು ಕೇಂದ್ರಸ್ಥಾನ ಬಿಡುವಂತಿಲ್ಲ:ಕರ್ತವ್ಯ ಆ್ಯಪ್ ಕಣ್ಗಾವಲು

**ವೈದ್ಯರಿಗೆ ರಾತ್ರಿ ಹಾಜರಾತಿ ಕಡ್ಡಾಯ: ನವೆಂಬರ್ 1 ರಿಂದ ‘ಕರ್ತವ್ಯ’ ಆ್ಯಪ್‌ನಲ್ಲಿ ದಾಖಲಿಸಬೇಕು**

ಬೆಂಗಳೂರು: ಸರ್ಕಾರಿ ನೌಕರರು ಕೇಂದ್ರ ಸ್ಥಾನದಲ್ಲೇ ವಾಸವಿರುವುದನ್ನು ಖಾತ್ರಿಪಡಿಸಲು ರಾಜ್ಯ ಸರ್ಕಾರ ಹೊಸ ವ್ಯವಸ್ಥೆ ಜಾರಿಗೆ ತರುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಎಲ್ಲ ವೈದ್ಯರು ನವೆಂಬರ್ 1, 2026 ರಿಂದ ಪ್ರತಿದಿನ ‘ಕರ್ತವ್ಯ’ ಆ್ಯಪ್ ಮೂಲಕ ರಾತ್ರಿ ಹಾಜರಾತಿ ದಾಖಲಿಸಬೇಕೆಂದು ಸರ್ಕಾರಿ ಆದೇಶ (ಸಂಖ್ಯೆ: DPAR/2/SRC/2026) ಹೊರಡಿಸಲಾಗಿದೆ. ಆದೇಶಕ್ಕೆ ಅಕ್ಟೋಬರ್ 17, 2026 ರ ದಿನಾಂಕವಿದ್ದು, ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತದೆ.

ಉಪಲೋಕಾಯುಕ್ತರು ವಿಚಾರಣೆ ನಡೆಸಿದ ಹಲವು ಪ್ರಕರಣಗಳಲ್ಲಿ ಅಧಿಕಾರಿಗಳು ಮತ್ತು ನೌಕರರು ನಿಗದಿತ ಕೇಂದ್ರ ಸ್ಥಾನದಲ್ಲಿ ವಾಸಿಸದೆ ದೂರದ ಪ್ರದೇಶಗಳಲ್ಲಿ ಇರುವುದು ಕಂಡುಬಂದಿತ್ತು. ಇದರಿಂದ ಅವರು ಕರ್ತವ್ಯ ಸ್ಥಳಕ್ಕೆ ಸಕಾಲದಲ್ಲಿ ಹಾಜರಾಗುತ್ತಿರಲಿಲ್ಲ ಮತ್ತು ಕಚೇರಿ ಸಮಯದಲ್ಲಿ ಸಾರ್ವಜನಿಕರಿಗೆ ಲಭ್ಯರಿರುತ್ತಿರಲಿಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಉಪಲೋಕಾಯುಕ್ತರು ಗಮನಸೆಳೆದು, ಸುತ್ತೋಲೆ ಹೊರಡಿಸುವಂತೆ ಸಲಹೆ ನೀಡಿದ್ದರು. ಮುಖ್ಯಮಂತ್ರಿಯವರು ಈ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ.

ಹೊಸ ವ್ಯವಸ್ಥೆಯ ಪ್ರಕಾರ, ವೈದ್ಯರು ರಾತ್ರಿ 9 ಗಂಟೆಯ ನಂತರ, ತಮ್ಮ ಕೇಂದ್ರ ಸ್ಥಾನವಿರುವ ನಗರ, ಪಟ್ಟಣ ಅಥವಾ ಗ್ರಾಮದ ಭೌಗೋಳಿಕ (ಅಕ್ಷಾಂಶ-ರೇಖಾಂಶ) ಮಿತಿಯೊಳಗೆ ಹಾಜರಾತಿ ದಾಖಲಿಸಬೇಕು. ಮಂಜೂರಾದ ರಜೆಯಲ್ಲಿದ್ದಾಗ, ಸೂಕ್ತ ಅನುಮತಿಯೊಂದಿಗೆ ಕೇಂದ್ರ ಸ್ಥಾನದ ಹೊರಗೆ ಕರ್ತವ್ಯದಲ್ಲಿದ್ದಾಗ, ಅಥವಾ ಕೇಂದ್ರ ಸ್ಥಾನ ಬಿಡಲು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದಿದ್ದಾಗ ರಾತ್ರಿ ಹಾಜರಾತಿ ದಾಖಲಿಸುವುದು ಕಡ್ಡಾಯವಲ್ಲ. ಆದರೆ ಇದಕ್ಕೆ ಕಾರಣವನ್ನು ಆ್ಯಪ್‌ನಲ್ಲಿ ದಾಖಲಿಸಬೇಕು. ಆ್ಯಪ್‌ನಲ್ಲಿ ರಾತ್ರಿ ಹಾಜರಾತಿ ವ್ಯವಸ್ಥೆ ಮತ್ತು ಭೌಗೋಳಿಕ ಮಿತಿಯ ನಿರ್ವಹಣೆಯನ್ನು ಪ್ರಜಾ ಸೇವಾ ಇಲಾಖೆ ಮಾಡಲಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ರಾತ್ರಿ ಹಾಜರಾತಿ ವರದಿಗಳನ್ನು ಪ್ರತಿ ತಿಂಗಳು ಪರಿಶೀಲಿಸಬೇಕು. ಅನುಮತಿ ಇಲ್ಲದೆ ಕೇಂದ್ರ ಸ್ಥಾನದಲ್ಲಿ ವಾಸವಿಲ್ಲದ ವೈದ್ಯರ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮಗಳು ಹಾಗೂ 1965ರ ಸರ್ಕಾರಿ ಸುತ್ತೋಲೆಯ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಪ್ರಾಯೋಗಿಕ ಅನುಷ್ಠಾನದ ಫಲಿತಾಂಶದ ಆಧಾರದ ಮೇಲೆ, ಈ ವ್ಯವಸ್ಥೆಯನ್ನು ಇತರ ವೃಂದಗಳಿಗೆ ವಿಸ್ತರಿಸುವ ಬಗ್ಗೆ ಸಂಬಂಧಪಟ್ಟ ಇಲಾಖಾ ಕಾರ್ಯದರ್ಶಿಗಳ ಅಭಿಪ್ರಾಯ ಪಡೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.

ಈ ಹಿಂದೆ ಆರೋಗ್ಯ‌ಇಲಾಖೆಯ ಮುಖ್ಯಸ್ಥರಾಗಿ ಹರ್ಷಗುಪ್ತ ದಶಕಗಳಿಂದ ಒಂದೇ ಕಡೆ ಸ್ಥಾಪಿತರಾಗಿದ್ದ ಅಧಿಕಾರಿ ನೌಕರರಿಗೆ ವರ್ಗಾವಣೆಯ ಬಿಸಿ ಮುಟ್ಟಿಸಿದ್ದರು.ಈಗ ಕರ್ತವ್ಯ ಆ್ಯಪ್ ಮೂಲಕ ಕರ್ನಾಟಕದ ಸರಕಾರಿ ನೌಕರರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!