**ಗುತ್ತಿಗೆ, ಹೊರಗುತ್ತಿಗೆ ನೌಕರರ ಹಾಜರಾತಿಗೂ ಇನ್ನು “ಕರ್ತವ್ಯ” ಆ್ಯಪ್ ಕಡ್ಡಾಯ: ಡಿ.1ರಿಂದ ಜಾರಿ**
ಬೆಂಗಳೂರು: ಸರ್ಕಾರಿ ಇಲಾಖೆಗಳು ಮತ್ತು ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಹಾಜರಾತಿಯನ್ನು ಇನ್ನು ಮುಂದೆ “ಕರ್ತವ್ಯ” ಆ್ಯಪ್ ಮೂಲಕವೇ ದಾಖಲಿಸುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಈ ವ್ಯವಸ್ಥೆ ಡಿಸೆಂಬರ್ 1, 2026ರಿಂದ ಜಾರಿಗೆ ಬರಲಿದೆ.
ಪ್ರಜಾ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಅಕ್ಟೋಬರ್ 17ರಂದು ಈ ಕುರಿತು ಸುತ್ತೋಲೆ (ಸಂಖ್ಯೆ: PJSA/178/SAMS/2026) ಹೊರಡಿಸಿದ್ದಾರೆ. ಮುಖ್ಯಮಂತ್ರಿಯವರ ಅನುಮೋದನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
**ಏಕೆ ಈ ಕ್ರಮ?**
ಖಾಯಂ ಸರ್ಕಾರಿ ನೌಕರರ ಹಾಜರಾತಿಯನ್ನು ಈಗಾಗಲೇ ಕರ್ತವ್ಯ ಆ್ಯಪ್ನಲ್ಲಿ ದಾಖಲಿಸಲಾಗುತ್ತಿದೆ. ಆದರೆ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಅಪಾರ ಸಂಖ್ಯೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಹಾಜರಾತಿಯನ್ನು ಕೈಬರಹ ಅಥವಾ ಪ್ರತ್ಯೇಕ ವ್ಯವಸ್ಥೆಗಳ ಮೂಲಕ ನಿರ್ವಹಿಸಲಾಗುತ್ತಿತ್ತು. ಇವರ ವೇತನವನ್ನು ನೇರವಾಗಿ ಅಥವಾ ಸೇವಾ ಪೂರೈಕೆದಾರ ಸಂಸ್ಥೆಗಳ ಮೂಲಕ ಸರ್ಕಾರದ ಅನುದಾನದಿಂದಲೇ ಭರಿಸಲಾಗುತ್ತಿರುವುದರಿಂದ, ಹಾಜರಾತಿಯೂ ವಿಶ್ವಾಸಾರ್ಹ, ಏಕರೂಪ ಹಾಗೂ ಪರಿಶೀಲನಾರ್ಹವಾಗಿರಬೇಕು ಎಂಬುದು ಸರ್ಕಾರದ ಉದ್ದೇಶ.
**ಅಧಿಕಾರಿಗಳಿಗೆ ನಿರ್ದೇಶನ**
ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳಿಗೆ ಈ ಕೆಳಗಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ:
– ತಮ್ಮ ನಿಯಂತ್ರಣದಲ್ಲಿರುವ ಎಲ್ಲಾ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರನ್ನು ನವೆಂಬರ್ 25, 2026ರೊಳಗೆ ಆ್ಯಪ್ನಲ್ಲಿ ನೋಂದಾಯಿಸುವುದು.
– ನೋಂದಣಿಗೆ ಬೇಕಾದ ವಿವರಗಳನ್ನು ಹೊರಗುತ್ತಿಗೆ ಸಂಸ್ಥೆಗಳಿಂದ ಪಡೆದು, ಪೂರ್ಣ ಸಹಕಾರ ನೀಡುವಂತೆ ಆ ಸಂಸ್ಥೆಗಳಿಗೆ ಸೂಚಿಸುವುದು.
– ಡಿಸೆಂಬರ್ 1ರಿಂದ ಹಾಜರಾತಿಯನ್ನು ಕರ್ತವ್ಯ ಆ್ಯಪ್ನಲ್ಲಿ ಮಾತ್ರ ದಾಖಲಿಸುವುದನ್ನು ಖಚಿತಪಡಿಸುವುದು.
ಈ ಸೂಚನೆಗಳು ಸರ್ಕಾರದ ಅಧೀನದ ಎಲ್ಲಾ ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು ಹಾಗೂ ಸರ್ಕಾರಿ ಅನುದಾನದಿಂದ ನಡೆಯುವ ಇತರ ಸಂಸ್ಥೆಗಳಿಗೂ ಅನ್ವಯಿಸುತ್ತವೆ.
**ವೇತನ, ಬಿಲ್ ಪಾವತಿಗೂ ಲಿಂಕ್**
ಜನವರಿ 1, 2027ರಿಂದ ಇನ್ನಷ್ಟು ಕಠಿಣ ನಿಯಮ ಜಾರಿಗೆ ಬರಲಿದೆ:
– ಗುತ್ತಿಗೆ ನೌಕರರ ವೇತನವನ್ನು ಕರ್ತವ್ಯ ಆ್ಯಪ್ನಲ್ಲಿ ದಾಖಲಾದ ಹಾಜರಾತಿಯ ಆಧಾರದ ಮೇಲೆ ಮಾತ್ರ ಸೆಳೆಯಬೇಕು.
– ಹೊರಗುತ್ತಿಗೆ ಸಂಸ್ಥೆಗಳ ಬಿಲ್ಗಳನ್ನು ಆ್ಯಪ್ ಮೂಲಕ ಸೃಜಿಸಿದ ಹಾಜರಾತಿ ವರದಿಯೊಂದಿಗೆ ಮಾತ್ರ ಪಾವತಿಗೆ ಅಂಗೀಕರಿಸಬೇಕು.
– ಆ್ಯಪ್ನಲ್ಲಿ ದಾಖಲಾಗದ ಹಾಜರಾತಿಗೆ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳು ಯಾವುದೇ ಪಾವತಿ ಬಿಡುಗಡೆ ಮಾಡುವಂತಿಲ್ಲ.
**ಹೊಣೆಗಾರಿಕೆ**
ಆದೇಶ ಪಾಲನೆಗೆ ಇಲಾಖಾ ಮುಖ್ಯಸ್ಥರು ಹಾಗೂ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳು ವೈಯಕ್ತಿಕವಾಗಿ ಜವಾಬ್ದಾರರಾಗಿರುತ್ತಾರೆ. ಯಾವುದೇ ಲೋಪವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸುತ್ತೋಲೆ ಎಚ್ಚರಿಸಿದೆ. ನೋಂದಣಿ ಮತ್ತು ಬಳಕೆಗೆ ಸಂಬಂಧಿಸಿದ ತಾಂತ್ರಿಕ ನೆರವಿಗಾಗಿ ಇಲಾಖೆಗಳು ಕರ್ತವ್ಯ ಆ್ಯಪ್ನ ಯೋಜನಾ ನಿರ್ವಹಣಾ ಘಟಕವನ್ನು (PMU) ಸಂಪರ್ಕಿಸಬಹುದು.


