Wednesday, November 4, 2026
spot_img

ಪರಿಷತ್ ಸೋಲು:ಸಚಿವ ಬಾಲಕೃಷ್ಣ ವಿರುದ್ದ ಮಾಜಿ ಶಾಸಕ ಎ ಮಂಜುನಾಥ್ ವಾಗ್ದಾಳಿ

ಸಚಿವ ಎಚ್‌ಸಿಬಿ ವಿರುದ್ಧ ಎ.ಮಂಜುನಾಥ್ ವಾಗ್ದಾಳಿ

ಪುಟ್ಟಣ್ಣ ಪರ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆಂದು‌ ಪ್ರಮಾಣ ಮಾಡಲಿ ಎ.ಮಂಜು ಸವಾಲು

ರಾಮನಗರ: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಪುಟ್ಟಣ್ಣ ಅವರನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗದ ಸಚಿವ ಬಾಲಕೃಷ್ಣ, ತಾವು ಪ್ರಾಮಾಣಿಕವಾಗಿ ಪುಟ್ಟಣ್ಣ ಪರ ಕೆಲಸ ಮಾಡಿದ್ದೇನೆಂದು ಪ್ರಮಾಣ ಮಾಡಲಿ ಎಂದು ಮಾಜಿ ಶಾಸಕ ಎ. ಮಂಜುನಾಥ್ ಸವಾಲು ಹಾಕಿದರು.

ಬುಧವಾರ ತಮ್ಮ ಬಿಡದಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೀವು ಸಚಿವರಾಗಿದ್ದೀರಿ, ಬೆಂಗಳೂರಿನಲ್ಲಿಯೂ ಹಲವು ಸಚಿವರಿದ್ದಾರೆ. ಆದರೂ ನಿಮ್ಮದೇ ಪಕ್ಷದ ಎಂಎಲ್‌ಸಿ ಅಭ್ಯರ್ಥಿ ಪುಟ್ಟಣ್ಣ ಅವರನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೀರಾ? ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂಬುದನ್ನು ಸಾಬೀತುಪಡಿಸಲು ಬಂದು ಪ್ರಮಾಣ ಮಾಡಿ. ನೀವೇ ಚುನಾವಣೆಯಲ್ಲಿ ಕೆಲಸ ಮಾಡಿಲ್ಲ, ಬೇರೆಯವರ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕ ರಾಜಣ್ಣ ಅವರು ಪುಟ್ಟಣ್ಣ ಸೋಲಿಗೆ ವ್ಯಾಪ್ತಿಯ ಎಲ್ಲರೂ ಹೊಣೆ, ಹಾಗಾಗಿ ರಾಜೀನಾಮೆ ಕೊಡಬೇಕು ಎಂದಿದ್ದಾರೆ, ಅದಕ್ಕೆ ಬಾಲಕೃಷ್ಣ ಅವರು ರಾಜಣ್ಣ ಅವರ ವಿರುದ್ಧವೇ ಮಾತನಾಡಿದ್ದಾರೆ, ಪಕ್ಷದಿಂದ ಹೊರಹೋಗುವಂತೆ ಪರೋಕ್ಷವಾಗಿ ಹೇಳುತ್ತಿದ್ದಾರೆ, ರಾಜಣ್ಣ ಅವರನ್ನು ಪಕ್ಷ ಬಿಡುವಂತೆ ಹೇಳುತ್ತಿರುವುದು ಮುಖ್ಯಮಂತ್ರಿಗಳ ಆದೇಶವೇ ಎಂಬುದನ್ನು ಬಾಲಕೃಷ್ಣ ಸ್ಪಷ್ಟಪಡಿಸಲಿ ಎಂದರು.

ಹತ್ತು ಕೋಟಿಗೆ ತಲೆ ಮಾರಿಕೊಂಡವರು: ಬೇರೆಯವರತ್ತ ಬೆರಳು ತೋರಿಸುವ ಮೊದಲು ನಿಮ್ಮ ನಡವಳಿಕೆಯನ್ನು ಆತ್ಮಾವಲೋಕನ ಮಾಡಿಕೊಳ್ಳಿ. ನಾನೇ ಕೆಲಸ ಮಾಡಿಲ್ಲ, ಅಭ್ಯರ್ಥಿ ಪರ ಮತಯಾಚನೆಯನ್ನೂ ಮಾಡಿಲ್ಲ ಎಂದು ಅವರ ಆತ್ಮಸಾಕ್ಷಿಯೇ ಪ್ರಶ್ನಿಸುತ್ತಿದೆ ಎಂದು ವ್ಯಂಗ್ಯವಾಡಿದ ಮಂಜುನಾಥ್, ತಾವೇ ಹತ್ತು ಕೋಟಿಗೆ ತಲೆ ಮಾರಿಕೊಂಡವರು, ಹೆಚ್.ಡಿ.ಕುಮಾರಸ್ವಾಮಿಯವರು ಸೇರಿದಂತೆ ಎಲ್ಲರ ಬಗ್ಗೆ ಬೇಕಾಬಿಟ್ಟಿ ಮಾತನಾಡಲು ನಿಮಗೆ ಜಿಪಿಎ ನೀಡಿದ್ದಾರೆಯೇ ಎಂದು ಖಾರವಾಗಿ ಪ್ರಶ್ನಿಸಿದರು.

ಎಚ್‌ಸಿಬಿಗೆ ಗೆಲ್ಲಿಸುವ ಶಕ್ತಿ ಇಲ್ಲ: ಕಾಂಗ್ರೆಸ್‌ನಲ್ಲಿ ಬಾಲಕೃಷ್ಣ ಅವರ ಹಿರಿತನ ಶೂನ್ಯ, ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರ ಪರವಾಗಿಯೂ ಬಾಲಕೃಷ್ಣ ಕೆಲಸ ಮಾಡಿಲ್ಲ. ಮಾಗಡಿ ಕ್ಷೇತ್ರದಲ್ಲಿ 35 ಸಾವಿರ ಮತಗಳು ಹೆಚ್ಚುವರಿಯಾಗಿ ಡಾ.ಮಂಜುನಾಥ್ ಅವರಿಗೆ ಬಂದವು. ಪರಿಷತ್ ಚುನಾವಣೆಯಲ್ಲಿಯೂ ಅಷ್ಟೇ, ಅಧಿಕಾರ ಬೇಕು, ಚುನಾವಣೆಯಲ್ಲಿ ಕೆಲಸ ಮಾಡುವ ಶಕ್ತಿ ಇಲ್ಲ ಎಂದು ಒಪ್ಪಿಕೊಳ್ಳಿ ಎಂದು ತಿರುಗೇಟು ನೀಡಿದರು.

ಕೈ ಶಾಸಕರು ಪಕ್ಷಾಂತರಕ್ಕೆ ಉತ್ಸುಕ: ರಾಜಣ್ಣ ಜೆಡಿಎಸ್ ಪಕ್ಷಕ್ಕೆ ಬರುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಚುನಾವಣಾ ಪರ್ವ ಆರಂಭವಾದಾಗ ಯಾರು ಯಾವ ಪಕ್ಷಕ್ಕೆ ಹೋಗುತ್ತಾರೆ, ಯಾರು ಬರುತ್ತಾರೆ ಎಂಬುದು ಗೊತ್ತಾಗಲಿದೆ, ಹಲವು ಮಂದಿ ಜೆಡಿಎಸ್ ಪಕ್ಷಕ್ಕೆ ಬರಲು ಉತ್ಸುಕರಾಗಿದ್ದಾರೆ ಎಂದರು.

ಟೌನ್ ಶಿಪ್ ವಿಚಾರದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ

ಬಿಡದಿ ಟೌನ್ ಶಿಪ್ ಅಂತಿಮ ಅಧಿಸೂಚನೆ ಹೊರಡಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಈಗಾಗಲೇ ಫೈನಲ್ ನೋಟಿಫಿಕೇಶನ್ ಆಗಿದೆ. ಸತ್ಯಶೋಧನಾ ಸಮಿತಿಯ ವರದಿ ಕೇಳಿದ್ದೇವೆ ಎಂದು ಹೇಳಿದ್ದರು, ಸಮಿತಿ ಸಮರ್ಪಕವಾಗಿ ರೈತರ ಮನವಿ ಆಲಿಸಿಲ್ಲ, ಜಮೀನುಗಳಿಗೆ ಭೇಟಿ ಕೊಟ್ಟಿಲ್ಲ, ಏಕಪಕ್ಷೀಯ ತೀರ್ಮಾನ ಮಾಡಿರುವ ಅನುಮಾನವಿದೆ, ಸರ್ಕಾರ ನ್ಯಾಯಾಂಗ ನಿಂದನೆ ಮಾಡಿದ್ದು, ಈ ಸಂಬಂಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತೇವೆ ಎಂದರು.

ರೈತರನ್ನು ಯಾಮಾರಿಸುವ ಮೂಲಕ ರಾಜ್ಯ ಸರ್ಕಾರ ರೈತರ ಕಣ್ಣಿಗೆ ಮಣ್ಣು ಎರಚುತ್ತಿದೆ. ಈ ವಿಚಾರವಾಗಿ ಕೇಂದ್ರ ಸಚಿವ ಹೆಚ್​ಡಿಕೆ ಹಾಗೂ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇವೆ ಎಂದು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!