Tuesday, November 10, 2026
spot_img

ಬಿಸಿಯೂಟಕ್ಕೆ ಕ್ಲಸ್ಟರ್ ಕಿಚನ್:ಸಿಬ್ಬಂದಿ ಕೆಲಸಕ್ಕು ಸಂಚಕಾರ ತಂದರೆ ಶಿಕ್ಷಕರು? ಬೆನ್ನ ಹಿಂದಿದೆಯಾ ಇಸ್ಕಾನು!

**ಶಾಲೆಗಳಲ್ಲಿ ಬಿಸಿಯೂಟಕ್ಕೆ “ಕ್ಲಸ್ಟರ್ ಕಿಚನ್ ಸೆಂಟರ್” ಪ್ರಸ್ತಾಪ: ಅಭಿಪ್ರಾಯ ಕೇಳಿದ ಶಾಲಾ ಶಿಕ್ಷಣ ಇಲಾಖೆ; ಅಡುಗೆ ಸಿಬ್ಬಂದಿಗೆ ಉದ್ಯೋಗ ಭೀತಿ**

**ಬೆಂಗಳೂರು, ನ.10:** ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟವನ್ನು ಶಾಲೆಯಲ್ಲೇ ತಯಾರಿಸುವ ಬದಲು, ಕ್ಲಸ್ಟರ್ ಮಟ್ಟದಲ್ಲಿ “ಕ್ಲಸ್ಟರ್ ಕಿಚನ್ ಸೆಂಟರ್” ಆರಂಭಿಸಿ ಅಲ್ಲಿಂದ ಸರಬರಾಜು ಮಾಡುವ ಪ್ರಸ್ತಾಪದ ಕುರಿತು ಶಾಲಾ ಶಿಕ್ಷಣ ಇಲಾಖೆ ಅಭಿಪ್ರಾಯ ಕೋರಿದೆ.

ಪಿ.ಎಂ. ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯ ಜಂಟಿ ನಿರ್ದೇಶಕರು ನ.7ರಂದು ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು (ಆಡಳಿತ) ಹಾಗೂ ಜಿಲ್ಲಾ ಪಂಚಾಯತಿಯ ಪಿ.ಎಂ. ಪೋಷಣ್ ಶಕ್ತಿ ನಿರ್ಮಾಣ್ ಶಿಕ್ಷಣಾಧಿಕಾರಿಗಳಿಗೆ ಈ ಕುರಿತು ಜ್ಞಾಪನ ಹೊರಡಿಸಿದ್ದಾರೆ. ಕ್ಲಸ್ಟರ್ ಕಿಚನ್ ಸೆಂಟರ್ ಆರಂಭಿಸುವ ಬಗ್ಗೆ ಹಾಗೂ ಅದರ ಜಾರಿಗೆ ಎದುರಾಗಬಹುದಾದ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಅಭಿಪ್ರಾಯ ಸಲ್ಲಿಸುವಂತೆ ಸೂಚಿಸಲಾಗಿದೆ.

**ಶಿಕ್ಷಕರ ಸಂಘದ ಮನವಿ**

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ), ಬೆಂಗಳೂರು ಇದರ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಅ.7ರಂದು ಸಲ್ಲಿಸಿದ ಮನವಿಯ ಆಧಾರದ ಮೇಲೆ ಇಲಾಖೆ ಈ ಕ್ರಮ ಕೈಗೊಂಡಿದೆ. ಶಾಲೆಗಳಲ್ಲಿ ಬಿಸಿಯೂಟ ತಯಾರಿಸಿ ಮಕ್ಕಳಿಗೆ ಬಡಿಸುವ ಜವಾಬ್ದಾರಿಯಿಂದ ಶಿಕ್ಷಕರನ್ನು ಮುಕ್ತಗೊಳಿಸಿ, ಅವರು ಮಕ್ಕಳಿಗೆ ಮುಕ್ತವಾಗಿ ಕಲಿಸಲು ಅವಕಾಶ ಕಲ್ಪಿಸಬೇಕು ಎಂಬುದು ಸಂಘದ ಆಗ್ರಹ.

ಸಂಘದ ಸಲಹೆಯಂತೆ, ಕ್ಲಸ್ಟರ್ ಕಿಚನ್ ಸೆಂಟರ್‌ಗಳನ್ನು ಸಂಘ-ಸಂಸ್ಥೆಗಳು, ಸ್ವಸಹಾಯ ಗುಂಪುಗಳು ಅಥವಾ ಆಸಕ್ತ ಮಹಿಳಾ ಸಂಘಗಳಿಗೆ ನಿಗದಿಪಡಿಸಿ, ಅಲ್ಲಿ ಬಿಸಿಯೂಟ ತಯಾರಿಸಿ ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಸರಬರಾಜು ಮಾಡುವ ವ್ಯವಸ್ಥೆ ರೂಪಿಸಬೇಕು. ಕ್ಲಸ್ಟರ್ ಕಿಚನ್ ಸೆಂಟರ್‌ನಲ್ಲಿ ಅಡುಗೆ ಮಾಡಿ ಶಾಲೆಗೆ ಬಂದಾಗ, ಶಾಲೆಯ ಬಿಸಿಯೂಟ ಸಿಬ್ಬಂದಿಯನ್ನು ಊಟ ಬಡಿಸುವ ಕೆಲಸಕ್ಕೆ ಬಳಸಿಕೊಳ್ಳಬಹುದು ಎಂಬ ಅಭಿಪ್ರಾಯವನ್ನೂ ಸಂಘ ವ್ಯಕ್ತಪಡಿಸಿದೆ. ಈ ಬಗ್ಗೆ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ಮನವಿಯಲ್ಲಿ ಕೋರಲಾಗಿದೆ.

**ಅಡುಗೆ ಸಿಬ್ಬಂದಿಗೆ ಆತಂಕ**

ಈ ಯೋಜನೆ ಜಾರಿಯಾದರೆ ಈಗಾಗಲೇ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಬಿಸಿಯೂಟ ಅಡುಗೆಯವರು ಮತ್ತು ಸಹಾಯಕರ ಉದ್ಯೋಗಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ. ಅಡುಗೆ ತಯಾರಿಕೆಯೇ ಕ್ಲಸ್ಟರ್ ಕಿಚನ್‌ಗೆ ವರ್ಗವಾದರೆ, ಪ್ರತಿ ಶಾಲೆಯಲ್ಲಿ ಇಷ್ಟೊಂದು ಸಿಬ್ಬಂದಿಯ ಅಗತ್ಯ ಉಳಿಯುವುದಿಲ್ಲ. ಊಟ ಬಡಿಸುವ ಕೆಲಸಕ್ಕೆ ಕಡಿಮೆ ಸಂಖ್ಯೆಯ ಸಿಬ್ಬಂದಿ ಸಾಕಾಗುವುದರಿಂದ ಹಲವರು ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಬಿಸಿಯೂಟ ಸಿಬ್ಬಂದಿಯಲ್ಲಿ ಬಹುತೇಕರು ಗ್ರಾಮೀಣ ಭಾಗದ ಮಹಿಳೆಯರು, ಅದರಲ್ಲೂ ಬಡ ಮತ್ತು ಹಿಂದುಳಿದ ವರ್ಗದವರು. ಅತ್ಯಲ್ಪ ಗೌರವಧನದಲ್ಲಿ ವರ್ಷಗಳಿಂದ ದುಡಿಯುತ್ತಿರುವ ಇವರಿಗೆ ಇದೇ ಜೀವನಾಧಾರ. ಈ ಕೆಲಸ ಹೋದರೆ ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಕಾರ್ಮಿಕ ಸಂಘಟನೆಗಳು ಹೇಳುವ ಸಾಧ್ಯತೆಯಿದೆ.

ಇದರ ಜೊತೆಗೆ ಕೆಲವು ಪ್ರಶ್ನೆಗಳೂ ಎದ್ದಿವೆ:

– ಕ್ಲಸ್ಟರ್ ಕಿಚನ್‌ನಿಂದ ದೂರದ ಹಳ್ಳಿ ಶಾಲೆಗಳಿಗೆ ಬಿಸಿಯೂಟ ತಲುಪುವಾಗ ಆಹಾರ ತಣ್ಣಗಾಗುವುದಿಲ್ಲವೇ?
– ಸಾಗಾಣಿಕೆ ವೇಳೆ ಆಹಾರದ ಗುಣಮಟ್ಟ ಮತ್ತು ಸುರಕ್ಷತೆ ಹೇಗೆ ಖಾತ್ರಿಯಾಗುತ್ತದೆ?
– ಈಗಿರುವ ಸಿಬ್ಬಂದಿಗೆ ಪರ್ಯಾಯ ಉದ್ಯೋಗ ಅಥವಾ ಭದ್ರತೆ ಒದಗಿಸಲಾಗುತ್ತದೆಯೇ?
– ಸ್ಥಳೀಯವಾಗಿ ತಯಾರಾಗುವ ಬಿಸಿಯೂಟದ ರುಚಿ ಮತ್ತು ತಾಜಾತನ ಉಳಿಯುವುದೇ?
ಇಸ್ಕಾನ್ ಕೈವಾಡ: ಧಾರ್ಮಿಕ ಕಾರ್ಯಗಳ‌ ಹೆಸರಲ್ಲಿ ಈಗಾಗಲೇ ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಇಸ್ಕಾನ್ ಸಂಸ್ಥೆ ಈ ಹಿಂದೆಯೆ ಬಿಸಿಯೂಟ ಯೋಜನೆಯನ್ನು ಕಸಿಯಲು ಇನ್ನಿಲ್ಲದ ಪ್ರಯತ್ನ ನಡೆಸಿತ್ತು.ಇದರ ಭಾಗವಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಬಳಿ ಬೃಹತ್ ಕಿಚನ್ ಕ್ಲಸ್ಟರ್ ನಿರ್ಮಿಸಿ ನಾಲ್ಕೈದು ಜಿಲ್ಲೆಗಳ ಶಾಲೆಗಳಿಗೆ ಬಿಸಿಯೂಟ ಪೂರೈಸುವ ಪ್ರಯತ್ನ ನಡೆಸಿತ್ತು.ಆದರೆ ಬಿಸಿಯೂಟ ಸಿಬ್ಬಂದಿಯ ಹೋರಾಟದ ಫಲವಾಗಿ ಇಸ್ಕಾನ್ ಪ್ರಯತ್ನ ವಿಫಲಗೊಂಡಿತ್ತು.
ಈಗಾಗಲೇ ಹುಬ್ಬಳ್ಳಿಯಲ್ಲಿ ಬೃಹತ್ ಕಿಚನ್ ಕ್ಲಸ್ಟರ್ ಹೊಂದಿರುವ ಇಸ್ಕಾನ್ ಈ ಹಿಂದಿನ ಆರೋಗ್ಯ ಮಂತ್ರಿ ದಿನೇಶ್ ಗುಂಡೂರಾವ್ ಮೂಲಕ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆ ಸೇರಿದಂತೆ ಹಲವೆಡೆ ಯಾವುದೆ ಟೆಂಡರ್ ಇಲ್ಲದೆ ಫೋರ್ ಜಿ ವಿನಾಯತಿ ಹೆಸರಲ್ಲಿ ರೋಗಿಗಳಿಗೆ ಪಥ್ಯಾಹಾರದ ಗುತ್ತಿಗೆ ಲಪಟಾಯಿಸಿದೆ.ಮೆನುವಿನಂತೆ ಆಹಾರ ಒದಗಿಸದೆ ತನ್ನ ನಂಬಿಕೆಗನುಗುಣವಾಗಿ ಮೊಟ್ಟೆ ವಿತರಣೆ ನಿಲ್ಲಿಸಿದೆ.ಈಗಿನ ಈ ಪ್ರಯತ್ನದ ಹಿಂದೆ ಸಹ ಇಸ್ಕಾನ್ ಕೈವಾಡದ ಶಂಕೆಯಿದ್ದು.

ಸದ್ಯ ಇದು ಕೇವಲ ಪ್ರಾಥಮಿಕ ಹಂತದ ಪ್ರಸ್ತಾಪವಾಗಿದ್ದು, ಇಲಾಖೆ ಅಭಿಪ್ರಾಯ ಮಾತ್ರ ಕೇಳಿದೆ. ಯೋಜನೆ ಜಾರಿಯ ಬಗ್ಗೆ ಅಂತಿಮ ತೀರ್ಮಾನ ಆಗಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳ ವರದಿ ಬಂದ ನಂತರ ಸರ್ಕಾರ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!