ಮೈಸೂರು: ಮಂಡಕಳ್ಳಿ ವಿಮಾನ ನಿಲ್ದಾಣದ ನಂಜನಗೂಡು ರಸ್ತೆಯ ಕಾಂಪೌಂಡ್ ಎದುರು ಇರುವ ಮರಸೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಹುಲಿ ಓಡಾಟದಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಮಂಡಹಳ್ಳಿ ಮರಸೆ, ಹೊಸಹುಂಡಿ, ಗುಡುಮಾದನಹಳ್ಳಿ ಗ್ರಾಮ ಸೇರಿದಂತೆ ಜೆ.ಪಿ.ನಗರಕ್ಕೆ ಸಂಪರ್ಕಿಕಿಸುವ ಸೇತುವೆ ಬಳಿ ಒಂದು ವಾರದಿಂದ ನಿರಂತರವಾಗಿ ಗ್ರಾಮಸ್ಥರ ಕಣ್ಣಿಗೆ ಹುಲಿ ಕಾಣಿಸಿಕೊಂಡು ಆತಂಕವನ್ನುಂಟು ಮಾಡಿದೆ.
ಕೆಲ ತಿಂಗಳ ಹಿಂದೆ ಮಂಡಕಳ್ಳಿ ವಿಮಾನ ನಿಲ್ಧಾಣದ ಸಮೀಪವೇ ಹುಲಿ ಕಾಣಿಸಿಕೊಂಡಿದ್ದ ಪರಿಣಾಮ, ಅರಣ್ಯ ಇಲಾಖೆಯು ಸಾಕಾನೆಗಳ ಸಹಾಯದಿಂದ ಕೆಲ ದಿನಗಳ ಕಾಲ ಹುಲಿ ಸೆರೆ ಕಾರ್ಯಾಚರಣೆ ನಡೆಸಿದರೂ ಬೋನಿಗೆ ಸಿಗದೇ ಹುಲಿ ನಾಪತ್ತೆಯಾಗಿತ್ತು. ನಂತರ ಕೆಲ ದಿನಗಳ ಬಳಿಕ, ಬೆಮೆಲ್ ಆವರಣದಲ್ಲಿ ಇದೇ ಹುಲಿ ಓಡಾಟ ಮಾಡಿ, ನಂತರ ಅಲ್ಲಿಯೂ ಸೆರೆಯಾಗದೇ ಕೆಲ ತಿಂಗಳು ನಾಪತ್ತೆಯಾಗಿತ್ತು. ಹುಲಿ ಸೆರೆ ಹಿಡಿದು,ಗ್ರಾಮಸ್ಥರ ಆತಂಕವನ್ನು ಅರಣ್ಯ ಇಲಾಖೆ ದೂರ ಮಾಡಬೇಕು ಎನ್ನುತ್ತಾರೆ ಗುಡುಮಾದನಹಳ್ಳಿ ರೈತ ಉಮೇಶ್.
ಎರಡು ತಿಂಗಳ ಹಿಂದೆ ಗ್ರಾಮಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಹುಲಿ, ಈಗ ವಾರದಿಂದ ಬೆಳಗ್ಗೆ, ಮಧ್ಯಾಹ್ನ ಜಮೀನುಗಳು, ತೋಟಗಳತ್ತ ನುಗ್ಗುತ್ತಿದೆ. ಇದರಿಂದ ಜಮೀನು ಹಾಗೂ ತೋಟಗಳ ಬಳಿ ತೆರಳಲು ಗ್ರಾಮಸ್ಥರು ಹಾಗೂ ತೋಟದ ಮಾಲೀಕರು, ಕೆಲಸದಾಳುಗಳು ಹೆದರುವಂತಾಗಿದೆ. ಕೆಲ ದಿನಗಳ ಹಿಂದೆ ನಾಲ್ಕು ಹಸುಗಳ ಮೇಲೆ ಹುಲಿ ದಾಳಿ ಮಾಡಿದಾಗ, ಸಮೀಪ ಇದ್ದ ರೈತರು ಜೋರಾಗಿ ಕೂಗಿ ಅದನ್ನು ಓಡಿಸಿದ್ದರು. ರಾತ್ರಿ ವೇಳೆಯಲ್ಲಿ ಸಂಚರಿಸುತ್ತಿದ್ದ ಹುಲಿ, ಈಗ ಹಗಲು ಹೊತ್ತಿನ್ಲಲೇ ಜಮೀನುಗಳತ್ತ ಬರುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಬೋನಿಗೆ ಬೀಳದ ಹುಲಿ: ಕೆಲ ತಿಂಗಳ ಹಿಂದೆ ಮಂಡಕಳ್ಳಿ ವಿಮಾನನಿಲ್ದಾಣದ ಸಮೀಪ ಓಡಾಟ ಮಾಡಿದಾಗ, ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತ್ತು. ಆ ವೇಳೆ ಹುಲಿ ಸಿಗದೇ ನಾಪತ್ತೆಯಾಗಿತ್ತು. ಈಗ ಅದೇ ಸುತ್ತಮುತ್ತಲ ಗ್ರಾಮಗಳಲ್ಲಿ ಸಂಚಾರ ಮಾಡುವ ಮೂಲಕ ಗ್ರಾಮಸ್ಥರಿಗೆ ಆತಂಕ ತಂದರೆ, ಅರಣ್ಯ ಇಲಾಖೆಗೆ ಮತ್ತೆ ಹುಲಿ ಕಾಣಿಸಿಕೊಂಡಿರುವುದು ತಲೆ ನೋವಾಗಿದೆ. ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆಯು ಮರಸೆ ಗ್ರಾಮದ ಜಮೀನಿನಲ್ಲಿ ಹುಲಿ ಸೆರೆಗೆ ಬೋನನ್ನು ಇಟ್ಟು, ಮೂರು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದೆ.
ಮರಸೆ ಗ್ರಾಮದ ಜಮೀನಿನಲ್ಲಿಯೇ ಹುಲಿ ರಾಜರೋಷವಾಗಿ ಓಡಾಡಿದೆ. ಅಲ್ಲದೇ, ಗ್ರಾಮದಿಂದ ನಂಜನಗೂಡು ಮುಖ್ಯರಸ್ತೆಗೆ ಸಂಪರ್ಕಿಸುವ 100 ಮೀ. ಅಂತರದಲ್ಲಿ ಹುಲಿ ಸಂಚಾರ ಮಾಡಿದೆ ಎಂದು ಮರಸೆ ಗ್ರಾಮದ ರೈತ ಕುಮಾರ್ ತಿಳಿಸಿದ್ದಾರೆ.
ಮರಸೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಹುಲಿ ಸಂಚಾರದ ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ, ಹುಲಿ ಸೆರೆಗೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಡಿಸಿಎಫ್ ಪರಮೇಶ್ ಮಾಹಿತಿ ನೀಡಿದ್ದಾರೆ


