ವಿವಾಹ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದು ಒಂದಾದ ಯುವ ದಂಪತಿಗಳು* ..
ಕಳೆದ ಒಂದು ವರ್ಷದ ಹಿಂದೆಯಷ್ಟೆ ವಿವಾಹವಾಗಿ ಸಣ್ಣಪುಟ್ಟ ವಿಚಾರಕ್ಕೆ, ಮನಸ್ತಾಪ ಬಂದು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಕೆ.ಆರ್.ಪೇಟೆ ತಾಲೂಕಿನ ಅಂಚೆ ಮುದ್ದನಹಳ್ಳಿ ಗ್ರಾಮದ ಯುವ ಜೋಡಿಗಳು ಇಂದು ಕೆ.ಆರ್.ಪೇಟೆ ಪಟ್ಟಣದ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಒಂದಾಗಿ ಮರಳಿ ಹೊಸ ಜೀವನಕ್ಕೆ ಕಾಲಿರಿಸಿದ್ದಾರೆ.
ನ್ಯಾಯಾಧೀಶರಾದ ಸುಧೀರ್ ಅವರ ಸಮಕ್ಷಮದಲ್ಲಿ ವಿವಾಹ ವಿಚ್ಛೇದನ ಅರ್ಜಿಯನ್ನು ವಾಪಸ್ ಪಡೆದು ನ್ಯಾಯಾಧೀಶರ ಸಮಕ್ಷಮದಲ್ಲಿ ಮಾಲೆ ಬದಲಾವಣೆ ಮಾಡಿಕೊಂಡು ಹೊಸ ಜೀವನಕ್ಕೆ ಕಾಲಿಟ್ಟರು. ಕಳೆದ ಒಂದು ವರ್ಷದ ಹಿಂದೆ ಅಷ್ಟೇ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅಂಚೆ ಮುದ್ದನಹಳ್ಳಿಯ ಹರೀಶ್ ಮತ್ತು ಮೈಸೂರಿನ ಕವನ ಕ್ಷುಲ್ಲಕ ವಿಚಾರಕ್ಕೆ ಬೇಸತ್ತು ವಕೀಲ ಕಾಮನಹಳ್ಳಿ ಕೆ. ಬೋರೆಗೌಡ ಅವರ ಮೂಲಕ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವ ದಂಪತಿಗಳಿಗೆ ವಕೀಲರ ಸಮಕ್ಷಮದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಸುಧೀರ್ ರವರು ಹಾಲಿಗೆ ಸಕ್ಕರೆ ಬೆರೆತರೆ ಹಾಲಿನ ರುಚಿ ಹೆಚ್ಚಾಗುವಂತೆ ಜೀವನದಲ್ಲಿ ಎದುರಾಗುವ ನೋವು ನಲಿವುಗಳು ಹಾಗೂ ಸಣ್ಣಪುಟ್ಟ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳದೆ ಪರಸ್ಪರ ಪ್ರೀತಿ ವಿಶ್ವಾಸ ಹಾಗೂ ನಂಬಿಕೆಯಿಂದ ಜೀವನ ನಡೆಸುವಂತೆ ತಿಳಿ ಹೇಳಿದರು.
ಇಬ್ಬರು ಮತ್ತೆ ಒಂದಾಗುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಯುವ ಜೋಡಿಗಳು ನ್ಯಾಯಾಧೀಶರ ಬುದ್ದಿಮಾತಿಗೆ ಸ್ಪಂದಿಸಿ ಒಂದಾದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಹೊನ್ನೇನಹಳ್ಳಿ ಹೆಚ್.ರವಿ, ಕಾಮನಹಳ್ಳಿ ಬೋರೇಗೌಡ, ವಿ.ಕೆ.ಸ್ವರೂಪ ಮತ್ತಿತರರು ಉಪಸ್ಥಿತರಿದ್ದರು. *ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ*.


