16ರಿಂದ ಅಹೋರಾತ್ರಿ ಧರಣಿ
ಸೋಮವಾರಪೇಟೆ: ತಾಲ್ಲೂಕಿನ ರೈತ ಹೋರಾಟಗಾರರ ಬೇಡಿಕೆಗಳನ್ನು ಕಂದಾಯ ಇಲಾಖೆ ಈಡೇರಿಸದಿದ್ದರೆ ನ.16 ರಿಂದ ತಾಲ್ಲೂಕು ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಬಗ್ಗನ ಅನಿಲ್ ಹೇಳಿದರು.
ಪೋಡಿ ದುರಸ್ತಿಗೆ ಆಗ್ರಹಿಸಿ ಈ ಹಿಂದೆ ತಾಲ್ಲೂಕು ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಡಾ. ಮಂತರ್ ಗೌಡ ಹಾಗೂ ಜಿಲ್ಲಾಧಿಕಾರಿಗಳು ಒಂದು ತಿಂಗಳೊಳಗೆ ದುರಸ್ತಿ ಕಾರ್ಯ ಪ್ರಾರಂಭಿಸುವುದಾಗಿ ಆದರೆ, ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರು ಸೇರಿದಂತೆ ಹೊರ ಭಾಗದಿಂದ ಬಂದವರಿಂದ ಮಧ್ಯವರ್ತಿಗಳು ಹೆಚ್ಚಿನ ಹಣ ಪಡೆದು ಪೋಡಿ ದುರಸ್ತಿಯನ್ನು ಕಂದಾಯ ಇಲಾಖೆಯಲ್ಲಿ ಮಾಡಲಾಗುತ್ತಿದೆ. ಸ್ಥಳೀಯರು ಪ್ರತಿ ದಿವಸ ಕಚೇರಿಗಳಿಗೆ ಅಲೆಯಬೇಕಾಗಿದೆ. ಇಲಾಖೆಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ:
‘ಪೋಡಿ ದುರಸ್ತಿ ‘ಸಿ’ಮತ್ತು ‘ಡಿ’ ಜಾಗದ ಸಮಸ್ಯೆ ಬಗೆಹರಿಸುವುದು, ಸುಬ್ರಮಣ್ಯ ರಸ್ತೆ ನಿರ್ಮಾಣ ಕಾಮಗಾರಿ ನಡೆಸುವುದು ಇವೆಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಶಾಸಕ ಡಾ. ಮಂತರ್ ಗೌಡ ಅವರು ನೀಡಿದ ಹಿನ್ನೆಲೆಯಲ್ಲಿ 2025ರಲ್ಲಿ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡಿದ್ದೆ. ಆದರೆ, ಶಾಸಕರು ನನ್ನ ಯಾವುದೇ ಭರವಸೆಯನ್ನು ಈಡೇರಿಸದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದರು.
ಗೋಷ್ಠಿಯಲ್ಲಿ ಹರಗ ಡಾಲಿ, ಚರಣ್ ಶುಂಠಿ ಇದ್ದರು.


