ಬೆಂಗಳೂರು: ರಾಜ್ಯದ 81 ಅನುಸೂಚಿತ ಉದ್ದಿಮೆಗಳ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಅಂತಿಮ ಅಧಿಸೂಚನೆಯನ್ನು ಪ್ರಶ್ನಿಸಿ ಕರ್ನಾಟಕ ಉದ್ಯೋಗದಾತರ ಸಂಘ (ಕೆಇಎ) ಮತ್ತು ಎಥೀರಿಯಲ್ ಮಷೀನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿವೆ.
ಮಂಗಳವಾರ ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಪೀಠ, ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತು. ಅಲ್ಲದೆ, ಕೇಂದ್ರ ಸರ್ಕಾರವನ್ನು ಪ್ರತಿವಾದಿ ಮಾಡಲು ಅರ್ಜಿದಾರರಿಗೆ ಸೂಚಿಸಿ ವಿಚಾರಣೆಯನ್ನು ಜೂನ್ 9ಕ್ಕೆ ನಿಗದಿಪಡಿಸಿತು.
ಅರ್ಜಿಯಲ್ಲೇನಿದೆ?: ರಾಜ್ಯ ಕಾರ್ಮಿಕ ಇಲಾಖೆ 2025ರ ಏಪ್ರಿಲ್ 11ರಂದು ಕರಡು ಅಧಿಸೂಚನೆ ಹೊರಡಿಸಿ, ರಾಜ್ಯದ ಒಟ್ಟು 84 ಉದ್ದಿಮೆಗಳಿಗೆ ಏಕರೂಪದ ಕನಿಷ್ಠ ವೇತನ ನಿಗದಿಪಡಿಸಲು ಪ್ರಸ್ತಾಪಿಸಿತ್ತು. ಇದನ್ನು ಪ್ರಶ್ನಿಸಿ ಉದ್ಯೋಗದಾತರ ಸಂಘಟನೆಗಳು ಈ ಹಿಂದೆ ಹೈಕೋರ್ಟ್‌ನಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್, ಕನಿಷ್ಠ ವೇತನ ಸಲಹಾ ಮಂಡಳಿಯ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಂಡರೂ, ನ್ಯಾಯಾಲಯದ ಅಂತಿಮ ಆದೇಶದವರೆಗೆ ಅನುಷ್ಠಾನಗೊಳಿಸಬಾರದು ಎಂದು 2025ರ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಸ್ಪಷ್ಟ ಮಧ್ಯಂತರ ಆದೇಶ ನೀಡಿತ್ತು. ಅದರ ಹೊರತಾಗಿಯೂ ರಾಜ್ಯ ಸರ್ಕಾರ ಅಂತಿಮ ಆದೇಶ ಹೊರಡಿಸಲಾಗಿದೆ.
ನ್ಯಾಯಾಲಯದ ಮಧ್ಯಂತರ ಆದೇಶದ ಹೊರತಾಗಿಯೂ, ನ್ಯಾಯಾಲಯದಿಂದ ಅನುಮತಿ ಪಡೆಯದೆ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿರುವುದು ನ್ಯಾಯಾಂಗ ನಿಂದನೆ ಮತ್ತು ಕಾನೂನು ಬಾಹಿರ ಕ್ರಮ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ರದ್ದಾಗಿರುವ ಕಾಯ್ದೆಯ ಬಳಕೆ: ಕೇಂದ್ರ ಸರ್ಕಾರ 2025ರ ನವೆಂಬರ್ 21ರಿಂದ ಜಾರಿಗೆ ಬರುವಂತೆ ಹೊಸ ‘ವೇತನ ಸಂಹಿತೆ 2019’ ಜಾರಿಗೊಳಿಸಿದೆ. ಈ ಹೊಸ ಸಂಹಿತೆಯ ಸೆಕ್ಷನ್ 69ರ ಪ್ರಕಾರ, ಹಳೆಯ ‘ಕನಿಷ್ಠ ವೇತನ ಕಾಯ್ದೆ 1948’ ಸಂಪೂರ್ಣವಾಗಿ ರದ್ದಾಗಿದೆ.
ಹೊಸ ಕಾನೂನಿನಲ್ಲಿ ‘ಅನುಸೂಚಿತ ಉದ್ದಿಮೆಗಳು’ ಎಂಬ ಪರಿಕಲ್ಪನೆಯನ್ನೇ ಕೈಬಿಡಲಾಗಿದೆ. ಹೀಗಿದ್ದರೂ, ರಾಜ್ಯ ಸರ್ಕಾರವು ಈಗಾಗಲೇ ರದ್ದಾಗಿಹೋಗಿರುವ 1948ರ ಕಾಯ್ದೆಯ ಸೆಕ್ಷನ್ 3(1)(ಬಿ) ಮತ್ತು 5(1)(ಬಿ) ಅನ್ನು ಉಲ್ಲೇಖಿಸಿ 81 ಉದ್ದಿಮೆಗಳ ಪಟ್ಟಿಯೊಂದಿಗೆ ಹೊಸ ಅಧಿಸೂಚನೆ ಹೊರಡಿಸಿದೆ. ಅಸ್ತಿತ್ವದಲ್ಲೇ ಇಲ್ಲದ ಕಾನೂನಿನ ಅಡಿಯಲ್ಲಿ ಸರ್ಕಾರ ಅಧಿಕಾರ ಚಲಾಯಿಸಿರುವುದು ಸಂವಿಧಾನದ ವಿಧಿ 300ಎ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಶೇ.60ರಷ್ಟು ಭಾರಿ ಏರಿಕೆ: ಸಾಮಾನ್ಯವಾಗಿ ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಕನಿಷ್ಠ ವೇತನ ಪರಿಷ್ಕರಣೆ ಶೇ.10ರಿಂದ 15ರಷ್ಟಿರುತ್ತಿತ್ತು. ವರ್ಷಕ್ಕೊಮ್ಮೆ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ವ್ಯತ್ಯಾಸವಾಗುವ ತುಟ್ಟಿಭತ್ಯೆಯನ್ನು ಈಗಾಗಲೇ ನೀಡಲಾಗುತ್ತಿರುತ್ತದೆ. ಆದರೆ, ಪ್ರಸ್ತುತ ಅಧಿಸೂಚನೆಯಲ್ಲಿ ಏಕಾಏಕಿ ಶೇ.60ರಷ್ಟು ವೇತನ ಹೆಚ್ಚಳ ಮಾಡಲಾಗಿದೆ.
ಸರ್ಕಾರದ ಈ ಅವೈಜ್ಞಾನಿಕ ಮತ್ತು ದಿಢೀರ್ ಏರಿಕೆಯಿಂದ ರಾಜ್ಯದ ಶೇ.90ರಷ್ಟು ಉದ್ಯೋಗ ಸೃಷ್ಟಿಸುವ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಆರ್ಥಿಕವಾಗಿ ದಿವಾಳಿಯಾಗುವ ಭೀತಿ ಎದುರಿಸುತ್ತಿವೆ. ಈಗಾಗಲೇ ಕರ್ನಾಟಕದಲ್ಲಿನ ಕನಿಷ್ಠ ವೇತನ ದರಗಳು ದೆಹಲಿಯನ್ನು ಹೊರತುಪಡಿಸಿದರೆ ದೇಶದಲ್ಲೇ ಅತಿ ಹೆಚ್ಚಾಗಿವೆ. ನೆರೆರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು ಮುಂತಾದ ಕೈಗಾರಿಕಾ ರಾಜ್ಯಗಳಿಗಿಂತ ಇಲ್ಲಿ ವೇತನ ದರಗಳು ಗಗನಕ್ಕೇರಿದ್ದು, ಇದು ರಾಜ್ಯದ ಕೈಗಾರಿಕಾ ಪ್ರಗತಿಗೆ ಹಿನ್ನಡೆಯಾಗಲಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಅಲ್ಲದೆ, ಕನಿಷ್ಠ ವೇತನದ ಮೂಲ ಮಿತಿಯನ್ನು ಕೇಂದ್ರ ಸರ್ಕಾರ ನಿಗದಿ ಪಡಿಸಿದ ಬಳಿಕವೇ ರಾಜ್ಯ ಸರ್ಕಾರ ನಿಗದಿಪಡಿಸಬೇಕು ಎಂದು ಕಾನೂನಿನಲ್ಲಿ ತಿಳಿಸಲಾಗಿದೆ. ಹೀಗಿದ್ದರೂ, ಕೇಂದ್ರ ಸರ್ಕಾರಕ್ಕೂ ಮುನ್ನವೇ ರಾಜ್ಯ ಸರ್ಕಾರ ವೇತನ ನಿಗದಿಪಡಿಸಿರುವ ಕಾನೂನು ಬಾಹಿರ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಸಂವಿಧಾನದ ಪರಿಚ್ಛೇದ 19(1)(ಜಿ) ಅಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಇಚ್ಚಿಸಿದ ಉದ್ಯೋಗವನ್ನು ಮಾಡುವುದಕ್ಕೆ ಅವಕಾಶವಿದೆ. ಆದರೆ, ಸರ್ಕಾರದ ಹೊರಡಿಸಿರುವ ಅಧಿಸೂಚನೆಯಲ್ಲಿನ ಅಸಮಂಜಸವಾದ ದರಗಳಿಂದ ಈ ಹಕ್ಕಿನ ಉಲ್ಲಂಘನೆಯಾಗಲಿದೆ.
2025ರ ಏಪ್ರಿಲ್‌ನಿಂದ 2026ರ ಮಾರ್ಚ್ ಅವಧಿಯಲ್ಲಿ ಉದ್ಯೋಗದಾತ ಸಂಸ್ಥೆಗಳು ಗ್ರಾಹಕರ ಬೆಲೆ ಸೂಚ್ಯಂಕ(ಸಿಪಿಐ)ದ ಆಧಾರದಲ್ಲಿ ತುಟ್ಟಿಭತ್ಯೆಯನ್ನು ಪಾವತಿಸಿದ್ದಾರೆ. ನಿಯಮದ ಪ್ರಕಾರ ಹೊಸ ಅಧಿಸೂಚನೆಯಲ್ಲಿ ಸಿಪಿಐ ಆಧಾರದಲ್ಲಿ ತುಟ್ಟಿಭತ್ಯೆಯನ್ನು ಮಾತ್ರ ಕಡ್ಡಾಯಗೊಳಿಸಬೇಕಿತ್ತು. ಇದೀಗ ಉದ್ಯೋಗದಾತರು ಈಗಾಗಲೇ ಪಾವತಿಸಿರುವ ಭತ್ಯೆಯನ್ನು ಮತ್ತೊಮ್ಮೆ ನೀಡಬೇಕಾಗಿದೆ. ಇದು ಅಧಿಕಾರಿಗಳ ಬೇಜಾವಾಬ್ದಾರಿತನ ಮತ್ತು ದುಡುಕಿನ ನಿರ್ಧಾರಕ್ಕೆ ಸಾಕ್ಷಿಯಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಆದ್ದರಿಂದ ಕಾನೂನುಬಾಹಿರವಾಗಿ 2026ರ ಮೇ 22ರಂದು ಹೊರಡಿಸಿರುವ ಅಂತಿಮ ಅಧಿಸೂಚನೆ ಸಂಪೂರ್ಣವಾಗಿ ರದ್ದುಗೊಳಿಸಬೇಕು. ಅಲ್ಲಿಯವರೆಗೆ ಈ ಅಧಿಸೂಚನೆಯ ಅನುಷ್ಠಾನ ಮತ್ತು ಕಾರ್ಯಾಚರಣೆಗೆ ತಕ್ಷಣವೇ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.


