Tuesday, November 17, 2026
spot_img

ಕಬ್ಬು ಕಟಾವು ಸಾಗಾಣೆ ಸರಕಾರವೇ ಭರಿಸಲಿ:ಕಬ್ಬು ಬೆಳೆಗಾರರ ಒಕ್ಕೂಟ ಮನವಿ

**ಟನ್ ಕಬ್ಬಿಗೆ ₹3,800 ದರ ನೀಡಲು ಒತ್ತಾಯ**

**ಕಬ್ಬು ಕಟಾವು, ಸಾಗಣೆ ವೆಚ್ಚವನ್ನು ಕಾರ್ಖಾನೆಗಳೇ ಭರಿಸಲಿ: ಒಕ್ಕೂಟ ಮನವಿ**

 

ಮಂಡ್ಯ: ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿಗೆ ನೀಡುತ್ತಿರುವ ದರವನ್ನು ಮಂಡ್ಯ ಜಿಲ್ಲೆಯ ರೈತರಿಗೂ ನೀಡಬೇಕು. ಪ್ರತಿ ಟನ್‌ಗೆ ₹3,600ರಿಂದ ₹3,800ರವರೆಗೆ ದರ ನಿಗದಿಪಡಿಸಬೇಕು ಎಂದು ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಕುಮಾರ ಅವರನ್ನು ಸೋಮವಾರ ಭೇಟಿಯಾಗಿ ಮನವಿ ಸಲ್ಲಿಸಿದ ಮುಖಂಡರು, ಜಿಲ್ಲೆಯ ರೈತರಿಗೆ ಆಗುತ್ತಿರುವ ದರದ ತಾರತಮ್ಯ ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಸಾತನೂರು ವೇಣುಗೋಪಾಲ್ ಮಾತನಾಡಿ, ‘ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಪ್ರತಿ ಟನ್ ಕಬ್ಬಿಗೆ ₹3,600 ಹಾಗೂ ಬಾಗಲಕೋಟೆಯಲ್ಲಿ ₹3,800 ನೀಡಲಾಗುತ್ತಿದೆ. ಆದರೆ, ಮಂಡ್ಯದಲ್ಲಿ ಕೇವಲ ₹3,383 ದರ ನೀಡಲಾಗುತ್ತಿದೆ. ಇದು ರೈತರಿಗೆ ಆಗುತ್ತಿರುವ ಅನ್ಯಾಯ’ ಎಂದು ಆಕ್ಷೇಪಿಸಿದರು.

2026–27ನೇ ಸಾಲಿನಲ್ಲಿ ಮಂಡ್ಯ ಜಿಲ್ಲೆಯ ಐದು ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿಯಲ್ಲಿ ಸುಮಾರು 40 ಲಕ್ಷ ಟನ್ ಕಬ್ಬು ಪೂರೈಕೆಯಾಗುತ್ತಿದೆ. ಈ ಎಲ್ಲ ರೈತರಿಗೂ ಉತ್ತರ ಕರ್ನಾಟಕದ ಕಾರ್ಖಾನೆಗಳಿಗೆ ಸಮಾನವಾದ ದರ ದೊರೆಯಬೇಕು ಎಂದು ಒತ್ತಾಯಿಸಿದರು.
ಉತ್ತರ ಕರ್ನಾಟಕದ ಕಾರ್ಖಾನೆಗಳು ಕಬ್ಬಿನ ದರದ ಜತೆಗೆ ಕಟಾವು ಮತ್ತು ಸಾಗಣೆ ವೆಚ್ಚವನ್ನೂ ಭರಿಸುತ್ತಿವೆ. ಆದರೆ, ಮಂಡ್ಯ ಸೇರಿದಂತೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಈ ವೆಚ್ಚವನ್ನು ರೈತರೇ ಭರಿಸಬೇಕಿದೆ. ಕಟಾವು ಮತ್ತು ಸಾಗಣೆಗಾಗಿ ಪ್ರತಿ ಟನ್‌ಗೆ ₹1,000ರಿಂದ ₹1,200 ಖರ್ಚಾಗುತ್ತಿದೆ. ಹೀಗಾಗಿ ಮಂಡ್ಯದ ರೈತರಿಗೆ ಸಿಗುವ ನೈಜ ಆದಾಯ ಮತ್ತಷ್ಟು ಕಡಿಮೆಯಾಗುತ್ತಿದೆ ಎಂದು ಮುಖಂಡರು ಹೇಳಿದರು.

 

ಒಕ್ಕೂಟದ ಗೌರವಾಧ್ಯಕ್ಷ ಕೀಲಾರ ಕೃಷ್ಣ, ನಿರ್ದೇಶಕರಾದ ಪಾಪಣ್ಣ, ಮಂಜುನಾಥ್, ಸಾಮಾಜಿಕ ಹೋರಾಟಗಾರ ಎಂ.ಎಲ್. ತುಳಸೀಧರ್, ರೈತ ಮುಖಂಡ ಹೆಮ್ಮಿಗೆ ಚಂದ್ರಶೇಖರ್, ರಾಜು, ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ. ನಾಗಣ್ಣಗೌಡ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಡಿ. ಜಯರಾಮ್, ಸೋಮು, ರವಿ, ಬಿ. ರಮೇಶ್ ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!