Sunday, November 8, 2026
spot_img

ತಮಿಳುನಾಡಿಗೆ ಕಾವೇರಿ ನೀರು:ನದಿಗಿಳಿದು ಪ್ರತಿಭಟಿಸಿದ ರೈತರು

ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು: ಕಾವೇರಿ ನದಿಗಿಳಿದು ರೈತರ ಆಕ್ರೋಶ

ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯದಿಂದ ಕಾವೇರಿ ಮೂಲಕ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಭೂಮಿ ತಾಯಿ ಹೋರಾಟ ಸಮಿತಿಯ ರೈತ ಸದಸ್ಯರು ಕಾವೇರಿ ನದಿಯಲ್ಲಿ ಇಳಿದು ಪ್ರತಿಭಟನೆ ನಡೆಸಿದರು.

ಪಟ್ಟಣದ ಸ್ನಾನ ಘಟ್ಟದ ಬಳಿ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ಹಾಗೂ ಹಿರಿಯ ಹೋರಾಟಗಾರ ಕೆ.ಎಸ್. ನಂಜುಂಡೇಗೌಡ ಅವರ ನೇತೃತ್ವದಲ್ಲಿ ಸೇರಿದ್ದ ರೈತ ಕಾರ್ಯಕರ್ತರು, ನದಿಯಲ್ಲಿ ನಿಂತು ಕಾವೇರಿ ನೀರಾವರಿ ಪ್ರಾಧಿಕಾರ, ರಾಜ್ಯ ಸರ್ಕಾರ, ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಜಿಲ್ಲೆಯ ಶಾಸಕರ ವಿರುದ್ಧ ಘೋಷಣೆ ಕೂಗಿದರು.

ನಂತರ ಮಾತನಾಡಿದ ನಂಜುಂಡೇಗೌಡ, “ಮೈಸೂರು ಮಹಾರಾಜರು ತಮ್ಮ ಒಡವೆಗಳನ್ನು ಮಾರಿ ಅಣೆಕಟ್ಟೆ ಕಟ್ಟಿಸಿ ಜಿಲ್ಲೆಯ ರೈತರ ಬದುಕಿಗೆ ಆಸರೆ ನೀಡಿದ್ದರು. ಆದರೆ ಇಂದು ನಮ್ಮನ್ನಾಳುತ್ತಿರುವ ಜನಪ್ರತಿನಿಧಿಗಳು ತಮ್ಮ ಹಾಗೂ ತಮ್ಮ ಕುಟುಂಬದ ಹಿತಕ್ಕಾಗಿ ಹಣ, ಆಸ್ತಿ ಗಳಿಕೆಯಲ್ಲೇ ಮುಳುಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದಿನ ಜನಪ್ರತಿನಿಧಿಗಳಿಗೆ ರಾಜ್ಯದ ಜನತೆ ಹಾಗೂ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಅವರು ಟೀಕಿಸಿದರು. ನೀರನ್ನು ಉಳಿಸಿಕೊಳ್ಳಬೇಕಾದ ಸರ್ಕಾರವೇ ತಮಿಳುನಾಡಿಗೆ ನೀರು ಹರಿಸಿ ಅಣೆಕಟ್ಟೆಯನ್ನು ಬರಿದು ಮಾಡುತ್ತಿದ್ದು, ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದರು.

ರಾಜ್ಯದ ಬರ ಪರಿಸ್ಥಿತಿಯನ್ನು ಕಾವೇರಿ ಪ್ರಾಧಿಕಾರ ಅಥವಾ ಸುಪ್ರೀಂ ಕೋರ್ಟ್‌ಗೆ ಸರಿಯಾಗಿ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಇದರಿಂದಾಗಿಯೇ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಬಿಡುವ ಪರಿಸ್ಥಿತಿ ಎದುರಾಗಿದೆ. ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಿ ರಾಜ್ಯದ ಜನರನ್ನು ರಕ್ಷಿಸಬೇಕು ಎಂದು ಅವರು ಆಗ್ರಹಿಸಿದರು.

ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಬಿ.ಸಿ. ಕೃಷ್ಣೇಗೌಡ ಮಾತನಾಡಿ, ಕೆಆರ್‌ಎಸ್ ಅಣೆಕಟ್ಟೆಯನ್ನು ಖಾಲಿ ಮಾಡಲು ಸರ್ಕಾರ ಹೊರಟಂತಿದೆ ಎಂದು ದೂರಿದರು. ದಿನದಿಂದ ದಿನಕ್ಕೆ ಕಾವೇರಿ ನದಿಗೆ ಬಿಡುವ ನೀರಿನ ಪ್ರಮಾಣ ಹೆಚ್ಚಿಸುವ ಮೂಲಕ ರೈತರಿಗೆ ವಿಷ ಉಣಿಸಿ ಮೌನವಾಗಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್‌ಗೆ ಸರಿಯಾಗಿ ಮೇಲ್ಮನವಿ ಸಲ್ಲಿಸದ ಕಾರಣ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುವಂತಾಗಿದೆ ಎಂದ ಅವರು, ತಕ್ಷಣ ನೀರು ನಿಲ್ಲಿಸದಿದ್ದರೆ ಜಿಲ್ಲೆಯಾದ್ಯಂತ ರೈತರು ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಮುಖಂಡರಾದ ಎಂ.ವಿ. ಕೃಷ್ಣ, ಗಂಜಾಂ ಮರಿಯಪ್ಪ, ಜಗದೀಶ್, ಡಿ.ಎಂ. ಮಹೇಶ್, ಕಪರನಕೊಪ್ಪಲು ಸುರೇಶ್, ಡಿ. ಮಂಜುನಾಥ್, ರಾಮಕೃಷ್ಣ, ಮಹಾಲಿಂಗು, ಕೆಂಪೇಗೌಡ, ಕಿರಂಗೂರು ಪುಟ್ಟಣ್ಣ, ಮಹದೇವು, ಮೇಳಾಪುರ ಬಾಲು, ದೇವರಾಜು, ಚಂದಗಾಲು ರಾಮಕೃಷ್ಣ, ಪುರುಷೋತ್ತಮ, ಕಪರನಕೊಪ್ಪಲು ಮಹೇಶ್, ಪೈಲ್ವಾನ್ ನಾಗಣ್ಣ, ಅಚ್ಚಪ್ಪನಕೊಪ್ಪಲು ಕೃಷ್ಣ, ಕಡತನಾಳು ಚಾಮರಾಜು, ಕೆಂಗಾಲ್‌ಕೊಪ್ಪಲು ಪ್ರಕಾಶ್, ಮರಳಗಾಲ ಶಂಕರ್, ಹನುಮಂತನಗರ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!