**ಮಾಹಿತಿ ನೀಡದ ಮೈಸೂರು ಅಪರ ಜಿಲ್ಲಾಧಿಕಾರಿಗೆ ₹25,000 ದಂಡ: ಮಾಹಿತಿ ಆಯೋಗ ಆದೇಶ**
**ಬೆಂಗಳೂರು:** ಮಾಹಿತಿ ಹಕ್ಕು ಅಧಿನಿಯಮದ ಅಡಿ ಕೋರಿದ ಮಾಹಿತಿಯನ್ನು ನಿಗದಿತ ಅವಧಿಯಲ್ಲಿ ನೀಡದೆ, ಆಯೋಗದ ಆದೇಶವನ್ನೂ ಪಾಲಿಸದ ಮೈಸೂರು ಜಿಲ್ಲೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಶ್ರೀಮತಿ ಐಶ್ವರ್ಯ ಅವರಿಗೆ ಕರ್ನಾಟಕ ಮಾಹಿತಿ ಆಯೋಗ ₹25,000 ದಂಡ ವಿಧಿಸಿದೆ. ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಅವರು ನ.11ರಂದು ಈ ಆದೇಶ ಹೊರಡಿಸಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿ ಗ್ರಾಮದ ಟಿ.ಹೆಚ್. ಸ್ವಾಮಿ ಅವರು ಈ ಪ್ರಕರಣದ ಮೇಲ್ಮನವಿದಾರರು. ಅವರು 2026ರ ಮೇ 12ರಂದು ಮಾಹಿತಿ ಹಕ್ಕು ಅಧಿನಿಯಮದ ಕಲಂ 6(1) ಅಡಿ ಅರ್ಜಿ ಸಲ್ಲಿಸಿ, 2025ರ ಜಂಬೂಸವಾರಿ, ವಿಜಯದಶಮಿ ಮೆರವಣಿಗೆ ಹಾಗೂ ಪಂಜಿನ ಕವಾಯತಿಗೆ ಸಂಬಂಧಿಸಿದಂತೆ ಮಾಡಿದ್ದ ಆಸನ ವ್ಯವಸ್ಥೆಯ ಮಾಹಿತಿಯನ್ನು ದೃಢೀಕರಿಸಿ ನೀಡುವಂತೆ ಕೋರಿದ್ದರು. ನಿಗದಿತ ಅವಧಿಯಲ್ಲಿ ಮಾಹಿತಿ ಸಿಗದ ಕಾರಣ ಅವರು ಆಯೋಗದ ಮೊರೆ ಹೋಗಿದ್ದರು.
ಅ.7ರಂದು ನಡೆದ ವಿಚಾರಣೆಯಲ್ಲಿ, ಕೋರಿದ ಮಾಹಿತಿಯನ್ನು 15 ದಿನಗಳೊಳಗೆ ನೋಂದಾಯಿತ ಅಂಚೆ ಮೂಲಕ ನೀಡಬೇಕು ಮತ್ತು ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಆಯೋಗ ಸೂಚಿಸಿತ್ತು. ಅಲ್ಲದೆ, ಏಕೆ ದಂಡ ವಿಧಿಸಬಾರದು ಎಂಬುದಕ್ಕೆ ಲಿಖಿತ ಸಮಜಾಯಿಷಿ ಸಲ್ಲಿಸಲು ಸೂಚಿಸಿ, ತಪ್ಪಿದರೆ ಪ್ರಕರಣವನ್ನು ಅರ್ಹತೆಯ ಆಧಾರದ ಮೇಲೆ ತೀರ್ಮಾನಿಸಲಾಗುವುದು ಎಂದು ಎಚ್ಚರಿಸಿತ್ತು. ಆದರೂ ಅಧಿಕಾರಿ ಮಾಹಿತಿ ನೀಡಲಿಲ್ಲ, ಸಮಜಾಯಿಷಿಯನ್ನೂ ಸಲ್ಲಿಸಲಿಲ್ಲ, ಅ.7 ಮತ್ತು ನ.11ರ ಎರಡೂ ವಿಚಾರಣೆಗಳಿಗೆ ಗೈರುಹಾಜರಾದರು.
ಮಾಹಿತಿ ನೀಡಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಆಯೋಗದ ಆದೇಶ ಪಾಲಿಸದೆ ನಿರ್ಲಕ್ಷ್ಯ ತೋರಿದ್ದನ್ನು ಗಂಭೀರವಾಗಿ ಪರಿಗಣಿಸಿ, ಕಲಂ 20(1) ಅಡಿ ₹25,000 ದಂಡ ವಿಧಿಸಿದೆ.
ದಂಡದ ಮೊತ್ತವನ್ನು ಅಧಿಕಾರಿಯ ವೇತನದಿಂದ ಕಡಿತಗೊಳಿಸಿ, ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಿ ರಶೀದಿಯೊಂದಿಗೆ ವರದಿ ಸಲ್ಲಿಸುವಂತೆ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಅವರಿಗೆ ಆಯೋಗ ನಿರ್ದೇಶಿಸಿದೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಮೈಸೂರು ಜಿಲ್ಲಾ ಖಜಾನಾಧಿಕಾರಿ ಹಾಗೂ ಆಯೋಗದ ಕಾರ್ಯದರ್ಶಿಗಳಿಗೂ ಸೂಚಿಸಲಾಗಿದೆ.
ಕೈಗೊಂಡ ಕ್ರಮವನ್ನು ಪರಿಶೀಲಿಸಲು ಪ್ರಕರಣದ ಮುಂದಿನ ವಿಚಾರಣೆಯನ್ನು ಡಿ.14ರ ಬೆಳಿಗ್ಗೆ 11 ಗಂಟೆಗೆ ನಿಗದಿಪಡಿಸಲಾಗಿದೆ. ವೆಬ್ಎಕ್ಸ್ ಮೂಲಕ ಅಥವಾ ಖುದ್ದಾಗಿ ಹಾಜರಾಗುವಂತೆ ಸೂಚಿಸಲಾಗಿದೆ.
—


