Wednesday, November 25, 2026
spot_img

ಅವಧಿ ಮುಗಿದರು ಕಟಾವಾಗದ ಕಬ್ಬು:ರೈತರ ಪ್ರತಿಭಟನೆ

**ಕಬ್ಬು ಬೆಳೆದು 18 ತಿಂಗಳಾದರೂ ಕಟಾವಿಲ್ಲ: ಹೇಮಗಿರಿ ಕಾರ್ಖಾನೆ ಉಪ ಕಚೇರಿಗೆ ರೈತರ ಮುತ್ತಿಗೆ**

**ಕೆ.ಆರ್.ಪೇಟೆ:** ಕಬ್ಬು ಬೆಳೆದು 18 ತಿಂಗಳು ಕಳೆದರೂ ಕಟಾವು ಮಾಡದ ಮಾಕವಳ್ಳಿ ಹೇಮಗಿರಿ ಸಕ್ಕರೆ ಕಾರ್ಖಾನೆಯ ವಿರುದ್ಧ ರೈತರು ಆಕ್ರೋಶಗೊಂಡಿದ್ದು, ತಾಲ್ಲೂಕಿನ ಹರಿಹರಪುರ ಗ್ರಾಮದಲ್ಲಿರುವ ಕಾರ್ಖಾನೆಯ ಉಪ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕಚೇರಿ ಎದುರು ನೂರಾರು ರೈತರು ಜಮಾಯಿಸಿ, ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ, ತಕ್ಷಣ ಕಬ್ಬು ಕಟಾವು ಮಾಡಿಕೊಡುವಂತೆ ಆಗ್ರಹಿಸಿದರು. ನಾಟಿ ಮಾಡಿ 18 ತಿಂಗಳಾಗಿದ್ದು, ಕಬ್ಬು ಹೊಲದಲ್ಲೇ ಒಣಗುತ್ತಿದೆ. ಒಣಗಿದ ಕಬ್ಬಿಗೆ ತೂಕವೂ ಬರುತ್ತಿಲ್ಲ, ಸೂಕ್ತ ಬೆಲೆಯೂ ಸಿಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡರು.

ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಶಿವಮೂರ್ತಿ, “ಕಟಾವು ಮಾಡಿಸಿಕೊಡಿ ಎಂದು ಕಚೇರಿಗೆ ಅಲೆದು ಸಾಕಾಗಿದೆ. ಅಧಿಕಾರಿಗಳು ನಮ್ಮ ಮಾತನ್ನೇ ಕೇಳುತ್ತಿಲ್ಲ. ಹಣ ಕೊಟ್ಟವರ ಕಬ್ಬು ಮಾತ್ರ ಕಟಾವಾಗುತ್ತಿದ್ದು, ಬಡ ರೈತರ ಕಬ್ಬು ಹೊಲದಲ್ಲೇ ಒಣಗುತ್ತಿದೆ. ಸಾಲ ಮಾಡಿ ಕಬ್ಬು ಬೆಳೆದಿದ್ದು, ಬಡ್ಡಿ ಕಟ್ಟುವುದು ಹೇಗೆ?” ಎಂದು ಪ್ರಶ್ನಿಸಿದರು.

ಕಾರ್ಖಾನೆಯ ಸಹಯೋಗದಲ್ಲಿರುವ ಕಟಾವು ಕಾರ್ಮಿಕರು ಪ್ರತಿ ಟನ್‌ಗೆ ₹1,500 ಕೇಳುತ್ತಿದ್ದಾರೆ. ಕಾರ್ಖಾನೆ ನೀಡುವುದು ಪ್ರತಿ ಟನ್‌ಗೆ ₹3,300 ಮಾತ್ರ. ಅದರಲ್ಲಿ ಅರ್ಧದಷ್ಟು ಕಟಾವಿಗೇ ಹೋದರೆ, ಗೊಬ್ಬರ, ಕೂಲಿ ಸೇರಿದಂತೆ ಎಲ್ಲಾ ಖರ್ಚಿನ ನಂತರ ರೈತರಿಗೆ ಏನೂ ಉಳಿಯುವುದಿಲ್ಲ ಎಂದು ಅವರು ಹೇಳಿದರು.

ಕೇನ್ ಮ್ಯಾನೇಜರ್ ದತ್ತಾತ್ರೇಯ ಅವರು “ನೀವು ಎಷ್ಟೇ ಪ್ರತಿಭಟನೆ ಮಾಡಿದರೂ ನಾವು ಹೆದರುವುದಿಲ್ಲ” ಎನ್ನುತ್ತಾರೆ ಎಂದು ಆರೋಪಿಸಿದ ಶಿವಮೂರ್ತಿ, “ಇದು ರೈತರಿಗೆ ಮಾಡುವ ಅವಮಾನ. ರೈತರಿಲ್ಲದಿದ್ದರೆ ಫ್ಯಾಕ್ಟರಿಯೇ ಇಲ್ಲ ಎಂಬುದನ್ನು ಮರೆಯಬಾರದು. ಕೂಡಲೇ ಕಬ್ಬು ಕಟಾವು ಮಾಡದಿದ್ದರೆ ಕಾರ್ಖಾನೆ ಮುಂದೆ ಉಗ್ರ ಹೋರಾಟ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರೈತರಾದ ಆನಂದ್, ಲಕ್ಷ್ಮಮ್ಮ, ಕೃಷ್ಣೇಗೌಡ, ನಾಗೇಗೌಡ, ಶಂಕರ್, ಸುಭಾಷ್, ಲೋಕೇಶ್, ವೆಂಕಟೇಶ್, ದಿಲೀಪ್, ರಾಜಣ್ಣ, ಮಾದೇವಣ್ಣ, ಮಾದೇವ, ಕರುಣಾಕರ್, ಶೇಷಾದ್ರಿ, ಜಗದೀಶ್, ಪ್ರದೀಪ್, ರಂಗಸ್ವಾಮಿ, ಮಧು ಡಿ.ಎಸ್ ಸೇರಿದಂತೆ ಹಲವು ರೈತರು ಪಾಲ್ಗೊಂಡಿದ್ದರು.

*ವರದಿ: ಮನು ಮಾಕವಳ್ಳಿ, ಕೆ.ಆರ್.ಪೇಟೆ*

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!