ಕೆ ಆರ್ ಎಸ್ ಜಲಾಶಯದಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ೬ ನೇ ಹಂತದ ಕುಡಿಯುವ ನೀರಿನ ಯೋಜನೆಯು ಅವೈಜ್ಞಾನಿಕ ವಾಗಿದ್ದು ಕೂಡಲೇ ಯೋಜನೆಯನ್ನು ರದ್ದುಗೊಳಿಸಬೇಕೆಂದು ನೀರಾವರಿ ತಜ್ಞ ಅರ್ಜುನ ಹಳ್ಳಿ ಪ್ರಸನ್ನಕುಮಾರ ಸರ್ಕಾರಕ್ಕೆ ಒತ್ತಾಯಿಸಿದರು.
ಅವರು ಮಂಡ್ಯ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ 6ನೇ ಹಂತದ ಬೆಂಗಳೂರು ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೆ ಆರ್ ಎಸ್ ಜಲಾಶಯದಿಂದ ನೇರವಾಗಿ ೬ ಟಿಎಂಸಿ ನೀರು ಎತ್ತಲು ದಿನಾಂಕ 26.02.2026 ಕಡತ ಸಂಖ್ಯೆ ಯು ಡಿ ಡಿ 232 ಬಿಎಂಎಸ್ 2025ರ ಅಡಿಯಲ್ಲಿ ನೀಡಲಾದ ಸಚಿವ ಸಂಪುಟದ ಅನುಮೋದನೆಯನ್ನು ರದ್ದುಗೊಳಿಸಬೇಕೆಂದು ಹೇಳಿದರು.
ಈ ಯೋಜನೆಯಿಂದ ಕಾವೇರಿ ಕಣಿವೆಯ ರೈತರಿಗೆ ಹಾಗೂ ಅಕ್ಕಪಕ್ಕ ಜಿಲ್ಲೆಯ ಜನರಿಗೆ ಕುಡಿಯುವ ನೀರು ಮತ್ತು ಬೇಸಾಯಕ್ಕೆ ತೊಂದರೆ ಉಂಟಾಗುತ್ತದೆ ಆದ್ದರಿಂದ ಪರ್ಯಾಯ ಮಾರ್ಗಗಳಿಂದ ಬೆಂಗಳೂರಿಗೆ ಕುಡಿಯುವ ನೀರಿನ ಯೋಜನೆಯನ್ನು ಕಬಿನಿ ಮತ್ತು ಕಾವೇರಿ ಸಂಗಮದ ಭಾಗಗಳಲ್ಲಿ ಚೆಕ್ ಡ್ಯಾಂ ನಿರ್ಮಿಸಿ ಕುಡಿಯುವ ನೀರಿಗೆ ಯೋಜನೆ ರೂಪಿಸಬೇಕೆಂದು ಹೇಳಿದರು.
ಅಣೆಕಟ್ಟೆ ಭದ್ರತೆ ದೃಷ್ಟಿಯಿಂದ ಕೆಆರ್ ಎಸ್ ಜಲಾಶಯದಲ್ಲಿ ಕನಿಷ್ಠ 48 ಅಡಿ ನೀರು ಸದಾ ಅಣೆಕಟ್ಟೆಯಲ್ಲಿ ಇರಬೇಕು. ಆದರೆ ಆ ನೀರನ್ನು ಸಹ ಎತ್ತಲು ಸರ್ಕಾರ ಮುಂದು ಆಗುತ್ತಿರುವುದು ಕೃಷ್ಣರಾಜಸಾಗರ ಅಣೆಕಟ್ಟೆ ಶಿಥಿಲಗೊಳ್ಳುತ್ತದೆ. ಅಣೆಕಟ್ಟೆ ಸುರಕ್ಷಾ ಕಾಯ್ದೆ ಸಹ ಇದಕ್ಕೆ ಅವಕಾಶ ನೀಡುವುದಿಲ್ಲ. ತಜ್ಞರನ್ನು ಒಳಗೊಂಡಂತ ಸಮಿತಿ ಇದನ್ನು ಪರಿಶೀಲಿಸಿ ಮುಂದಿನ ಕ್ರಮವನ್ನು ಜರುಗಿಸಬೇಕು.
ಕೃಷ್ಣರಾಜಸಾಗರದ ಭೂ ಪ್ರದೇಶವನ್ನು ಒತ್ತುವರಿ ಮಾಡಿದ ಭೂಮಿಯನ್ನು ತೆರವುಗೊಳಿಸಿ ಆಳವನ್ನಾಗಿಸಿದರೆ ಹೆಚ್ಚುವರಿಯಾಗಿ ನೀರು ಸಂಗ್ರಹವಾಗಬಹುದು ಇದರಿಂದ ಕುಡಿಯುವ ನೀರು ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಸರ್ಕಾರ ಜಾರಿ ಮಾಡಬೇಕೆಂದು ಈ ಮೂಲಕ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ತಿಳಿಸಿದರು.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷರಾದ ಬಿ ಶಿವಲಿಂಗಯ್ಯ ಮಾತನಾಡಿ ಆರನೇ ಕುಡಿಯುವ ನೀರಿನ ಯೋಜನೆಯಿಂದಾಗಿ ಮಂಡ್ಯದ ರೈತರು ಮತ್ತಷ್ಟು ಸಂಕಷ್ಟದಿಂದ ಬದುಕಬೇಕಾಗುತ್ತದೆ ಒಂದೆಡೆ ಅವೈಜ್ಞಾನಿಕ ನ್ಯಾಯ ಮಂಡಳಿಯ ತೀರ್ಪಿಗಳಿಂದಾಗಿ ಅನ್ಯಾಯಕ್ಕೆ ಒಳಗಾದರೆ ಮತ್ತೊಂದೆಡೆ 6ನೇ ಕುಡಿಯುವ ನೀರಿನ ಯೋಜನೆಯಿಂದ ಮತ್ತಷ್ಟು ಅನ್ಯಾಯವಾಗುತ್ತದೆ.
ಇದರ ಜತಗೆ ಮೈಸೂರು ನಗರ ಹುಣಸೂರಿಗೆ ಕೆ ಆರ್ ಎಸ್ ಉತ್ತರ ಭಾಗದಿಂದ ೧೧ ಟಿಎಂಸಿ ನೀರು ಕೊಂಡೊಯ್ಯುವ ಯೋಜನೆ ಸಿದ್ದವಾಗಿದೆ.ಇದರ ಒಟ್ಟು ಪರಿಣಾಮವಾಗಿ ಮಂಡ್ಯ ಜಿಲ್ಲೆಯ ಬೇಸಾಯ ನೀರಿಲ್ಲದೆ ಸೊರಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾವೇರಿ ನೀರಿನ ಸಮಸ್ಯೆಗೆ ಅಗತ್ಯ ಸಂಕಷ್ಡ ಸೂತ್ರ ರಚನೆಯಾಗಿಲ್ಲ.ಹೆಚ್ಚುವರಿ ನೀರನ್ನು ತಮಿಳುನಾಡಿನ ಪಾಲಿನ ನೀರಿಗೆ ಜಮಾ ಮಾಡಬೇಕುಇಲ್ಲವೆ.ಕಬಿನಿಯ ಹೆಚ್ಚುವರಿ ನೀರನ್ನು ಕೆ ಆರ್ ಎಸ್ ಗೆ ತಿರುಗಿಸುವ ಸಾಧ್ಯತೆಗಳನ್ನು ಯೋಚಿಸಬೇಕು ಇಲ್ಲವೆ ಹೆಚ್ಚುವರಿ ನೀರಿನ ಸಂಗ್ರಹಕ್ಕೆ ತಮಿಳುನಾಡು ಹೆಚ್ಚುವರಿ ಅಣೆಕಟ್ಟೆಗಳನ್ನು ನಿರ್ಮಿಸಿಕೊಳ್ಳಬೇಕಿದೆ.ಮೇಕೆದಾಟಿನ ಮೇಲೆ ಅವಲಂಬನೆ ಬದಲು ನದಿಯುದ್ದಕ್ಕು ಚೆಕ್ ಡ್ಯಾಂಗಳನ್ನು ಕಟ್ಟಿ ನೀರು ಬಳಸಲು ಅವಕಾಶವಿದೆ ಈ ಕುರಿತು ರಾಜ್ಯ ಸರಕಾರ ಯೋಚಿಸಬೇಕು ಎಂದರು.
ಈ ಸಂಧರ್ಭದಲ್ಲಿ ಮಳವಳ್ಳಿಯ ರೈತಸಂಘದ ಮಹೇಶ್.ಕನ್ನಡ ಸೇನೆಯ ಎಚ್ ಸಿ ಮಂಜುನಾಥ್.ಜೈಕರ್ನಾಟಕ ಪರಿಷತ್ ಅಧ್ಯಕ್ಷ ಎಸ್ ನಾರಯಣ್ ಕರ್ನಾಟಕ ರಕ್ಷಣಾ ವೇದಿಕೆಯ ಎಚ್ ಡಿ ಜಯರಾಂ.ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ ಉಪಸ್ಥಿತರಿದ್ದರು.


