ಎಲ್ಲರ ಕೈಗೆ ಮೊಬೈಲ್ ಬಂದ ಮೇಲೆ ಈಗ ಎಲ್ಲರೂ ಪತ್ರಕರ್ತರೆ ಆಗಿದ್ದಾರೆ.
ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚುತ್ತಿದ್ದಂತೆ ಸುದ್ದಿಯ ವ್ಯಾಖ್ಯಾನವು ಬದಲಾಗಿದೆ.ಒಂದು ಕಾಲಕ್ಕೆ ಸುದ್ದಿ ಎನಿಸಿಕೊಳ್ಳುತ್ತಿದ್ದ ವಸ್ತು ವಿಷಯ. ವ್ಯಕ್ತಿ. ಈಗ ಸುದ್ದಿ ಎನಿಸಿಕೊಳ್ಳುತ್ತಿಲ್ಲ.
ಒಂದು ಕಾಲಕ್ಕೆ ಲಕ್ಸುರಿ ಎನಿಸಿದ್ದ ಕಾರುಗಳು ಈಗ ಸಾಮಾನ್ಯ ಸಂಗತಿಯಾಗಿದೆ.ಯಾವುದೆ ಘಟನೆ ಇರಲಿ.ಅದು ವಾಟ್ಸ್ ಫ್ ಫೇಸ್ ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಯಾರ ಕೈಗೆ ಸೇರಬೇಕೋ ಅದು ಥಟ್ಟನೆ ಸೇರುತ್ತದೆ.ಮರುದಿನ ಅದೇ ಸುದ್ದಿಯನ್ನು ಹಂಚುವ ಪತ್ರಿಕೆಗಳಲ್ಲಿ ಯಾವ ಸ್ವಾರಸ್ಯವಿದೆ.
ಮೊದಲೆಲ್ಲ ಇಷ್ಟೊಂದು ಸಂಪರ್ಕ ಸಾಧನಗಳು ಇಲ್ಲದ ಕಾಲದಲ್ಲಿ ಅಂಚೆ ಪತ್ರಗಳು ತಮ್ಮೊಂದಿಗೆ ಅದೆಷ್ಟೋ ಭಾವ ತೀವ್ರತೆಯನ್ನು ಹೊತ್ತು ತರುತ್ತಿದ್ದವು.ಮತ್ತೊಂದು ಅಂಚೆ ಪತ್ರ ಬರುವತನಕ ಅದೆಷ್ಟು ಸಾರಿ ಓದಿಸಿಕೊಳ್ಳುವ ಸೌಭಾಗ್ಯ ಪಡೆದಿದ್ದವು ಆ ಪತ್ರಗಳು! ಆದರೀಗ ವಾಟ್ಸ್ ಫ್ ಪಠ್ಯ ಸಂದೇಶಗಳ ಕಾಲದಲ್ಲಿ ಯಾರ ಬಗೆಯೂ ಯಾವುದೆ ಕೌತುಕ ವಿಸ್ಮಯ ಇಲ್ಲವಾಗಿದೆ.
ಇಂಥಹ ಸಂಧರ್ಭದಲ್ಲಿ ಮುದ್ರಣ ಮಾಧ್ಯಮವೊಂದು ಉಳಿದು ಬೆಳೆಯ ಬೇಕಾದ ಕಾಲದಲ್ಲಿ ನಾವಿದ್ದೇವೆ.
ಈ ಪರಿಸ್ಥಿತಿ ಪತ್ರಿಕೆಗಳು ಮಾತ್ರವಲ್ಲ.ಸುದ್ದಿ ವಾಹಿನಿಗಳು.ನಾಟಕಗಳು.ಸಿನಿಮಾಗಳು ಸಹ ಎದುರಿಸುತ್ತಿವೆ.
ಹಾಗಿದ್ದರೆ ಓದುಗನೊಬ್ಬ ಪತ್ರಿಕೆಯನ್ನು ಕೊಂಡು ಓದುವ ತುರ್ತು ಏನಿದೆ?
ಮೊನ್ನೆ ಅಬ್ಬರದ ಪ್ರಚಾರ ಕೊಟ್ಟ ಟಾಕ್ಸಿಕ್ ಸಿನಿಮಾ ನಿರೀಕ್ಷಿತ ಮಟ್ಟಕ್ಕೇರಲಿಲ್ಲ.ಚೆನ್ನಾಗಿದೆ ಎಂಬ ಕಾರಣಕ್ಕೆ ಪ್ರೇಮದ ಊರಲಿ ಎಂಬ ಸಿನಿಮಾ ಪ್ರೇಕ್ಷಕರ ಬರೇ ಬಾಯಿ ಮಾತಿನ ಪ್ರಚಾರದಲ್ಲೆ ತನ್ನ ವಿಜಯ ಪತಾಕೆ ಹಾರಿಸುತ್ತಿದೆ.
ತಾಂತ್ರಿಕತೆ ಕಾರಣಕ್ಕೆ ಸುದ್ದಿಯ ರೂಪಗಳು ಬದಲಾಗಿದ್ದರು ಮುದ್ರಣ ಮಾಧ್ಯಮದ ಬಗೆಗಿನ ವಿಶ್ವಾಸಾರ್ಹತೆ ಕಡಿಮೆಯಾಗಿಲ್ಲ.ಈಗಿನ ಕಾಲಘಟ್ಟ ಯಾವುದನ್ನು ನೋಡಲು ಕೇಳಲು ಓದಲು ಬಯಸುತ್ತದೋ ಅದನ್ನು ಸುದ್ದಿಯ ರೂಪದಲ್ಲಿ ಕೊಡುವ ಕೆಲಸವಾಗಬೇಕಿದೆ.
ಎಲ್ಲ ರಂಗಗಳಂತೆ ಮಾಧ್ಯಮ ಕ್ಷೇತ್ರವೂ ಕೆಟ್ಟಿದೆ.ಪತ್ರಕರ್ತನೆಂದರೆ ಬಂಡಾಯಗಾರನೆಂಬ ಇಮೇಜು ಅಳಿಸಿಹೋಗಿದೆ.ಕಾರ್ಪೋರೆಟ್ ಕಂಪನಿಗಳು ಅಷ್ಟಿಷ್ಟು ವಿಶ್ವಾಸಾರ್ಹತೆ ಹೊಂದಿದ್ದ ಮಾಧ್ಯಮಗಳನ್ನು ಕಬಳಿಸಿ ಹಾಕಿ ಅವುಗಳನ್ನು ತಮ್ಮ ವಂಧಿಮಾಗದ ಸ್ಥಾನಕ್ಕೆ ತಮ್ಮ ಉದ್ದಿಮೆಗಳ ಉನ್ನತಿಗೆ ಬೆಂಗಾವಲಾಗಿ ರೂಪಿಸಿಕೊಂಡಿವೆ.
ಇಂಥಹ ಸಮಯದಲ್ಲಿ ಹಳೇ ಮೈಸೂರು ದಿನ ಪತ್ರಿಕೆಯನ್ನು ಪ್ರಾದೇಶಿಕ ಪತ್ರಿಕೆಯಾಗಿ ರೂಪಿಸುವ ಕೆಲಸಕ್ಕೆ ಕೈ ಹಾಕಿದ್ದೆನೆ.
ಪತ್ರಿಕೋದ್ಯಮದ ಬಗೆಗಿನ ನವಿರಾದ ಭಾವನೆಗಳ ಕಾಲ ಇದಲ್ಲದಿದ್ದರು ಸಣ್ಣ ಪ್ರಯತ್ನವನ್ನು ಉತ್ತಮವಾಗಿ ರೂಪಿಸಬೇಕೆಂಬ ಹಂಬಲ ನನ್ನದು.ಮಂಡ್ಯ ಸೇರಿದಂತೆ ಬೆಂಗಳೂರು ನಗರ.ಬೆಂಗಳೂರು ದಕ್ಷಿಣ (ರಾಮನಗರ) ಮೈಸೂರು ಚಾಮರಾಜನಗರ ಮಡಿಕೇರಿ.ಹಾಸನ.ತುಮಕೂರು ಹೀಗೆ ಹೆಸರಿನಂತೆ ಹಳೇ ಮೈಸೂರಿನ ಎಂಟು ಜಿಲ್ಲೆಗಳಲ್ಲಿ ಪತ್ರಿಕೆ ಪ್ರಾದೇಶಿಕ ಪತ್ರಿಕೆಯಾಗಿ ಪ್ರಸಾರಗೊಳ್ಳಲಿದೆ.ಪತ್ರಿಕೆಯ ಅಂತರ್ ಜಾಲ ತಾಣ ಸಹ ಎಂಟು ಜಿಲ್ಲೆಗಳ ಅಗತ್ಯ ಸುದ್ದಿಗಳನ್ನು ಹೊತ್ತು ತರಲಿದೆ.
ಈ ಪ್ರಯತ್ನದಲ್ಲಿ ಸಮಾಜದೆಡೆಗೆ ತುಡಿತ ಇರುವ ಬರಹಗಾರರು ಹೊಸ ಹೊಸ ಪ್ರತಿಭೆಗಳು ನಮ್ಮ ತಿಳುವಳಿಕೆಯನ್ನು ಹೆಚ್ಚಿಸಲಿ.ನಮ್ಮ ಮಿತಿಗಳಲ್ಲಿ ಪತ್ರಿಕೋದ್ಯಮವನ್ನು ಅದರ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ನಮ್ಮದು ಒಂದು ಪುಟ್ಟ ಹೆಜ್ಜೆ ಇದಾಗಿರಲಿದೆ ಎಂಬುದನ್ನು ಖಚಿತವಾಗಿ ಹೇಳಬಲ್ಲೆ.


