ಕನ್ನಡ ಪ್ರಾದೇಶಿಕತೆಯಲ್ಲ, ರಾಷ್ಟ್ರೀಯತೆ; ಪತ್ರಕರ್ತ ಸಿದ್ದೇಗೌಡ ಶ್ಯಾಮ್‌ಪ್ರಸಾದ್
ಮಂಡ್ಯದಲ್ಲಿ ಕನ್ನಡ ಮೊದಲು ಆಟೋ ರ್‍ಯಾಲಿ ಉದ್ಘಾಟನೆ
ಮಂಡ್ಯ, ಫೆ. 25- ಕನ್ನಡ ಪರ ಚಿಂತನೆ, ಕನ್ನಡ ಪರ ಹೋರಾಟ ಮತ್ತು ಕರ್ನಾಟಕದ ಹಿತದ ಬಗ್ಗೆ ಮಾತನಾಡುವುದನ್ನು “ಪ್ರಾದೇಶಿಕ” ಚಿಂತನೆ, “ಪ್ರಾದೇಶಿಕ” ಅಸ್ತಿತ್ವ, “ಪ್ರಾದೇಶಿಕ” ಧೋರಣೆ, ಅನ್ನೋ ಸಂಕುಚಿತ ಮಾತುಗಳಿಂದ ಕರೆಯೋದನ್ನು ಮೊದಲು ನಿಲ್ಲಿಸಬೇಕು ಎಂದು ಪತ್ರಕರ್ತ ಹಾಗೂ ನಮ್ಮ ನಾಡು ನಮ್ಮ ಆಳ್ವಿಕೆಯ ಸಂಘಟಕರಾದ ಸಿದ್ದೇಗೌಡ ಶ್ಯಾಮ್ ಪ್ರಸಾದ್ ಹೇಳಿದರು.
ಮಂಡ್ಯದಲ್ಲಿ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಸಹಯೋಗದಲ್ಲಿ, ಕರುನಾಡ ಸೇವಕರು ಸಂಘಟನೆ ಹಾಗೂ ಕರ್ನಾಟಕ ರಕ್ಷಣಾವೇದಿಕೆ ಆಯೋಜಿಸಿದ್ದ ಕನ್ನಡ ಮೊದಲು ಆಟೋ ರ್‍ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ನಾವು ಕನ್ನಡಕ್ಕೆ “ಪ್ರಾದೇಶಿಕ” ಅನ್ನೋ ಹಣೆಪಟ್ಟಿ ಕಟ್ಟಿ ಬಹಳ ತಪ್ಪು ಮಾಡುತ್ತಿದ್ದೇವೆ. ಈ ತಪ್ಪು ಹಣೆಪಟ್ಟಿಯಿಂದ ಕನ್ನಡ ಪರ ಚಿಂತನೆಯನ್ನೇ ರಾಷ್ಟ್ರೀಯತೆಗೆ ಪರ್ಯಾಯ ಅಂತಲೋ, ವಿರೋಧಿ ಅಂತಲೊ ಬಿಂಬಿಸುವ ಕೆಲಸ ನಡೆಯುತ್ತಿದೆ. ಕನ್ನಡ ಪ್ರಾದೇಶಿಕತೆ ಅಲ್ಲ, ರಾಷ್ಟ್ರೀಯತೆ, ಇದು ಜಗಕ್ಕೇ ಮಾದರಿ ಎಂದು ಅಭಿಪ್ರಾಯ ಪಟ್ಟರು.
“ಪ್ರಾದೇಶಿಕತೆ” ಅನ್ನೋ ಹಣೆಪಟ್ಟಿ ತೆಗೆಯಬೇಕೆಂದರೆ ನಾವು ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕಾದ ಬಹು ಮುಖ್ಯ ವಿಚಾರ ಏನೆಂದರೆ: ಕನ್ನಡ, ಕನ್ನಡಿಗ, ಕರ್ನಾಟಕದ ಹಿತವನ್ನು ಬಯಸುವುದು ಸಾವಿರಾರು ವರ್ಷಗಳ ನಮ್ಮ ನಾಗರೀಕತೆಯನ್ನು ನಾವು ಮೆರೆಸುವುದು, ಬೆಳೆಸುವುದು, ಕೊಂಡಾಡುವುದು ಹೇಗೆ ಸಂಕುಚಿತ ಮನೋಭಾವ ಆಗುತ್ತದೆ ಎಂದು ಅವರು ಪ್ರಶ್ನಿಸಿದರು.
ಸಾವಿರಾರು ವರ್ಷಗಳು ಕನ್ನಡದಲ್ಲಿ ಆಡಳಿತ ಮಾಡಿ ಈಗಿನ ಭಾರತದ 14-15 ರಾಜ್ಯಗಳಲ್ಲಿ ಬಾಂಗ್ಲಾದೇಶ, ನೇಪಾಳ ದೇಶಗಳಲ್ಲೂ ಕನ್ನಡ ಶಾಸನ ಹಾಕಿಸಿರುವ ನಮ್ಮ ರಾಜರು, ಚಕ್ರವರ್ತಿಗಳು ಪ್ರಾದೇಶಿಕರು ಹೇಗಾಗುತ್ತಾರೆ? ಇತಿಹಾಸದ ನೂರಾರು ಉದಾಹರಣೆಗಳಲ್ಲಿ ನಾನು ಮೂರೇ ಮೂರು ಉದಾಹರಣೆ ಕೊಟ್ಟು, ಕನ್ನಡದ ಜೊತೆ ಈ “ಪ್ರಾದೇಶಿಕ” ಅನ್ನೋ ಪದ ಬಳಸದೆ ಇರೋದಿಕ್ಕೆ ಕಾರಣ ಕೊಡುತ್ತೇನೆ ಎಂದು ಕನ್ನಡದ ಹಿರಿಮೆಯನ್ನು ವಿವರಿಸಿದರು.
ಮೊದಲನೇ ಉದಾಹರಣೆ ನಮ್ಮ ಈ ಮಂಡ್ಯ ನೆಲದ ರಾಜನಾದ ಗಂಗರ ಶ್ರೀಪುರುಷ ಮುತ್ತುರಸ ಇಂದಿಗೆ 1,275 ವರ್ಷಗಳ ಹಿಂದೆ ಇದೇ ಮಣ್ಣಿನಲ್ಲಿ ಕ್ರಾಂತಿ ಮಾಡಿದ! ಆಗಿನ ಕಾಲಕ್ಕಾಗಲೇ ಸಾವಿರಾರು ಅರಸರು ಭೂಮಿಮೇಲೆ, ಭಾರತದಲ್ಲಿ ಬಂದು ಹೋಗಿದ್ದರು. ಶ್ರೀಪುರುಷನ ಪೂರ್ವಿಕರು ಅದಾಗಲೇ 400 ವರ್ಷ ಗಂಗ ರಾಜ್ಯವನ್ನು ಆಳಿದ್ದರು. ಪ್ರಪಂಚದ ಆ ಎಲ್ಲಾ ರಾಜರು ತಾವು ಗೆದ್ದ ಯುದ್ಧಗಳು, ತಾವು ಮಾಡಿದ ಸಾಧನೆಗಳು, ತಾವು ಕೊಟ್ಟ ದಾನ ಧರ್ಮದ ಬಗ್ಗೆ ಮಾತ್ರ ಬರೆಸಿಕೊಳ್ಳುತ್ತಿದ್ದರು. ಭಾರತದಲ್ಲಿ ಕರ್ನಾಟಕದಲ್ಲೇ ಅತಿ ಹೆಚ್ಚು ರಾಜ ಶಾಸನಗಳನ್ನು ನಾವು ನೋಡಬಹುದು. ಆದರೆ ಅದಕ್ಕಿಂತ ಹೆಚ್ಚಿನ ಸಾಮಾನ್ಯ ಜನರ ಕಥೆಗಳನ್ನು ಹೇಳುವ ವೀರಗಲ್ಲುಗಳು ಇಲ್ಲಿವೆ. ಪ್ರಪಂಚದಲ್ಲೇ ಅತಿ ಹೆಚ್ಚು ಸಾಮಾನ್ಯ ಜನರ ಬಗ್ಗೆ ವೀರಗಲ್ಲುಗಳು, ಅದರ ಶಾಸನಗಳು ಸಿಗೋದು ಕರ್ನಾಟಕದಲ್ಲೇ 750ನೇ ಇಸವಿಯಲ್ಲಿ ಮುತ್ತರಸ ಶ್ರೀಪುರುಷ ತಂದ ಕ್ರಾಂತಿ ಇದು’ ಎಂದು ಇತಿಹಾಸವನ್ನು ಮೆಲುಕು ಹಾಕಿದರು.
ಹಳ್ಳಿಯ ಸಾಮಾನ್ಯ ಜನರು ಕೆರೆ ಕಟ್ಟುವುದಕ್ಕೋ ಮಾಡಿದ ದಾನಗಳು, ಹಳ್ಳಿ ರಕ್ಷಣೆ ಮಾಡುತ್ತಾ ಸತ್ತಾಗ, ಮುಂತಾಗಿ ಹತ್ತಾರು ಬಗೆಯ ಸಾಧನೆಗಳಿಗೆ ಶಾಸನ, ವೀರಗಲ್ಲುಗಳ ಮೂಲಕ ಅವರ ಕಥೆಯನ್ನು ಶಾಶ್ವತ ಮಾಡಲು ಹೊರಟ. ಗಂಗರ ರಾಜ್ಯ ಪ್ರಪಂಚದ ನಕ್ಷೆಯಲ್ಲಿ ಚಿಕ್ಕದಿರಬಹುದು, ಆದರೆ ಮುತ್ತರಸ ಮಾಡಿದ ಈ ರೀತಿಯ ಕನ್ನಡ, ಕನ್ನಡಿಗ, ಕರ್ನಾಟಕದ ಚಿಂತನೆಯ ಉದಾಹರಣೆ ಪ್ರಪಂಚದ ಇನ್ನೆಲ್ಲೂ ಸಿಗೊಲ್ಲ. ಇದು “ಪ್ರಾದೇಶಿಕ” ಕೆಲಸವ? ಇದು ಸಂಕುಚಿತ ಚಿಂತನೆಯ? ಇದು ಭಾರತದ ಇತರೇ ರಾಜರುಗಳಿಗೆ ಮಾತ್ರವಲ್ಲ, ಪ್ರಪಂಚಕ್ಕೇ ಮಾದರಿ ಎಂದರು.
ಕನ್ನಡಿಗರ ಕೆಲಸಗಳನ್ನು ಇನ್ನು ಮುಂದೆ “ಪ್ರಾದೇಶಿಕ” ಅಂತ ಕರೆಯೋದು ಬೇಡ. ನಾವು ಜಗತ್ತಿಗೇ ಮಾದರಿ. ಹದಿನೇಳನೇ ಶತಮಾನದ ಮಧ್ಯ ಭಾಗ.. ದಿಲ್ಲಿಯಲ್ಲಿ ಪ್ರಪಂಚದ ಅತ್ಯಂತ ಶ್ರೀಮಂತ ರಾಜನಾಗಿದ್ದ ಮೊಘಲರ ಶಾಹ್ ಜಹಾನ್, ಟರ್ಕಿಯಿಂದ, ಇಟಲಿಯಿಂದ, ಪರ್ಶಿಯಾದಿಂದ, ನಾನಾ ನಾಗರೀಕತೆಗಳಿಂದ ಜನರನ್ನು, ಕುಶಲಕರ್ಮಿಗಳು ಕರೆಸಿ ತಾಜ್ ಮಹಲ್ ಕಟ್ಟಿಸಿಕೊಂಡ. ಅದೇ ಸಮಯದಲ್ಲಿ ಬಿಜಾಪುರದಿಂದ ಮಧ್ಯ ಭಾರತವನ್ನು ಆಳುತ್ತಿದ್ದ ಬಿಜಾಪುರದ ಆದಿಲ್ ಶಾಹಿ ಸುಲ್ತಾನ ಇದೇ ರೀತಿ ಪರ್ಶಿಯಾದಿಂದ ಕುಶಲ ಕರ್ಮಿಗಳನ್ನು ಕರೆಸಿ ಗೋಲ್ ಗುಂಬಜ್ ಕಟ್ಟಿಸಿದ. ಆ ಗೋಲ್ ಗುಂಬಜ್ ಮೇಲೆ ದಕ್ಷಿಣ ಅಮೆರಿಕದಿಂದ ಆಗ ತಾನೇ ಬಂದಿದ್ದ ಪೈನ್ ಆಪಲ್ ಚಿತ್ರಗಳನ್ನು ಗಾರೆಯಲ್ಲಿ ಬಳಸಿದ್ದಾರೆ. ಇವರಿಬ್ಬರಿಗೆ ಹೋಲಿಸಿದರೆ ಆ ಕಾಲದಲ್ಲಿ ಕರ್ನಾಟಕದಲ್ಲಿ ಸಾಮ್ರಾಜ್ಯ ಇರಲಿಲ್ಲ. ಇದ್ದಿದ್ದು ಸಣ್ಣ ಪುಟ್ಟ ರಾಜರುಗಳು. ಕೆಳದಿಯ ಶಿವಪ್ಪ ನಾಯಕ ತಾಜ್ ಮಹಲ್ ಮೀರಿಸೋಕೆ ಪ್ರಯತ್ನ ಪಡಲಿಲ್ಲ, ಗೋಲ್ ಗುಂಬಜ್ ಮೀರಿಸೋಕೆ ಪ್ರಯತ್ನಿಸಲಿಲ್ಲ. ಬದಲಿಗೆ ನಮ್ಮ , ಕನ್ನಡ ಚಿಂತನೆಯ ರಾಜ ಕಟ್ಟಿದ್ದು ಪ್ರಪಂಚದ ಶಿವಪ್ಪ ನಾಯಕ ಪ್ರಪ್ರಥಮ ಕೃಷಿ ವಿಶ್ವವಿದ್ಯಾನಿಲಯ ಆರಂಭಿಸಿದ.
ಶಿವಪ್ಪ ನಾಯಕನೂ ಕೂಡ ಪ್ರಪಂಚದ ನಾನಾ ದೇಶಗಳಿಂದ ಜನರನ್ನು ಕರೆತಂದ. ನಾವು ಈಗ ನಮ್ಮದೇ ಅಂದುಕೊಂಡಿರೋ ಕಡಲೆಕಾಯಿ, ಮೆಣಸಿನಕಾಯಿ, ಆಲೂಗೆಡ್ಡೆ, ಟೊಮ್ಯಾಟೋ, ಪೈನ್ ಆಪಲ್, ಸೀತಾಫಲ ಇನ್ನು ಹತ್ತಾರು ತರಕಾರಿಗಳು ಹಣ್ಣುಗಳು, ಇವೆಲ್ಲ ಅಮೆರಿಕಾದಿಂದ 16-17 ನೇ ಶತಮಾನದಲ್ಲಿ ಇಂಡಿಯಾಗೆ ಬಂದಿದ್ದು. ಆಫ್ರಿಕಾದ ಈಗಿನ ಮೊಜಾಂಬಿಕ್ ದೇಶದಿಂದ ದಕ್ಷಿಣ ಅಮೆರಿಕಾದಿಂದ ತಂದು ಕಡಲೆಕಾಯಿ ಬೆಳೆಯುವುದರಲ್ಲಿ ಪ್ರವೀಣರನ್ನು ಕರೆತಂದ. ಮೆಣಸಿನಕಾಯಿ, ಟೊಮ್ಯಾಟೋ, ಮೆಕ್ಕೆ ಜೋಳ ಇನ್ನೂ ಹಲವಾರು ಗಿಡ ಮರಗಳ ಹಲವು ತಳಿಗಳನ್ನು ತರಿಸಿಕೊಂಡು ಪ್ರಪಂಚದ ಮೊಟ್ಟಮೊದಲ ಕೃಷಿ ವಿಶ್ವವಿದ್ಯಾಲಯವನ್ನು ಕನ್ನಡ ನೆಲದಲ್ಲಿ ಕಟ್ಟಿಸಿಕೊಟ್ಟ ಮಹಾನುಭಾವ!” ಎಂದು ಕನ್ನಡದ ಮಹತ್ವದ ಹೆಗ್ಗುರುತುಗಳನ್ನು ನೆನಪಿಸಿದರು.
ಮುಂದುವರಿದು, “ಆಗಿನ ಕಾಲಕ್ಕೆ ಪ್ರಪಂಚದ ಅತ್ಯಂತ ಶ್ರೀಮಂತ ರಾಜ ಈಗ ದಿಲ್ಲಿಯಲ್ಲಿ ಇರಲಿಲ್ಲ, ಹೈದರಾಬಾದ್ ನಲ್ಲಿ ಇದ್ದ. ಹೈದರಾಬಾದ್ ನಿಜಾಮ! ಈಗಿನ ಕಾಲಕ್ಕೆ 500 ಕೋಟಿ ರೂಪಾಯಿ ಬೆಲೆಬಾಳುವ ಜೇಕಬ್ ವಜ್ರವನ್ನು ಪೇಪರ್ ವೇಟ್ ಆಗಿ ತನ್ನ ಟೇಬಲ್ ಮೇಲೆ ಉಪಯೋಗಿಸುತ್ತಿದ್ದ! 1937 ರ ಟೈಮ್ ನಿಯತಕಾಲಿಕೆಯ ಮುಖಪುಟ ಅಲಂಕರಿಸಿದ್ದ. ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿ ಅಂತ! ಜನರ ದುಡ್ಡು ನಿಜಾಮನ ಜಾತ್ರೆ! ಅದೇ ಕಾಲದಲ್ಲಿ ನಮ್ಮ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜರು ಕನ್ನಂಬಾಡಿ ಕಟ್ಟುವಾಗ ಕಮ್ಮಿಬಿದ್ದದ್ದು ಎರಡುವರೆ ಕೋಟಿ ರೂಪಾಯಿ. ಇವತ್ತಿನ ಕಾಲಕ್ಕೆ ಅಂದಾಜು ಒಂದು ಸಾವಿರ ಕೋಟಿ ರೂಪಾಯಿ! ಮಹಾರಾಣಿ ಕೆಂಪನಂಜಮ್ಮಣ್ಣಿ ತನ್ನ ಒಡವೆಗಳನ್ನು ಅಡ ಇಟ್ಟು ಹಣ ತಂದರು. ಆ ಹಣದಿಂದ ಅಣೆಕಟ್ಟು ನಿರ್ಮಾಣವಾಯಿತು. ಮಹಾರಾಣಿ ಕೆಂಪನಂಜಮ್ಮಣ್ಣಿ ಮಾಡಿದ ಈ ರೀತಿಯ ಕನ್ನಡ, ಕನ್ನಡಿಗ, ಕರ್ನಾಟಕದ ಚಿಂತನೆಯ ಉದಾಹರಣೆ ಪ್ರಪಂಚದ ಇನ್ನೆಲ್ಲೂ ಸಿಗೊಲ್ಲ. ಇದು “ಪ್ರಾದೇಶಿಕ” ಕೆಲಸವ? ಇದು ಸಂಕುಚಿತ ಚಿಂತನೆಯ? ಇದು ಭಾರತದ ಇತರೇ ರಾಜರುಗಳಿಗೆ ಮಾತ್ರವಲ್ಲ, ಪ್ರಪಂಚಕ್ಕೇ ಮಾದರಿ” ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ಎಚ್ ಡಿ ಜಯರಾಮ್, ಕನ್ನಡ ಪರಿಚಾರಕರಾದ ಕೆ ಟಿ ಹನುಮಂತು, ಹಿಂದುಳಿದ ವರ್ಗಗಳ ಒಕ್ಕೂಟದ ಟಿ ಎಲ್ ಸಂದೇಶ್, ಜಯ ಕರ್ನಾಟಕ ಪರಿಷತ್ ನ ಎಸ್ ನಾರಾಯಣ್, ಕನ್ನಡ ಸೇವಕರ ಸಂಘಟನೆಯ ರಾಜ್ಯ ವಕ್ತಾರ ಎಂ ಬಿ ನಾಗಣ್ಣಗೌಡ, ಕನ್ನಡ ಮನಸ್ಸುಗಳು ಧನುಷ್ ಗೌಡ, ಸಂಜು ಆಲಕೆರೆ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮೊದಲು ಆಟೋ ರ್‍ಯಾಲಿಯಲ್ಲಿ 50ಕ್ಕೂ ಹೆಚ್ಚು ಆಟೋ ಚಾಲಕರು ಪಾಲ್ಗೊಂಡಿದ್ದರು. ಜ್ಞಾನಪೀಠ ಪುರಸ್ಕೃತರು, ಕನ್ನಡದ ಶ್ರೇಷ್ಠ ನಟ, ನಿರ್ದೇಶಕರು, ಕ್ರೀಡಾಪಟಗಳು, ರಾಜಕಾರಣಿಗಳು, ವಿದ್ವಾಂಸರು ಸೇರಿದಂತೆ ಕನ್ನಡದ ಪರಂಪರೆಯ ಶ್ರೇಷ್ಠ ವ್ಯಕ್ತಿಗಳ ಭಾವಚಿತ್ರಗಳಿಂದ ಅಲಂಕೃತವಾಗಿದ್ದ ಆಟೋಗಳು ಕಾಳಿಕಾಂಭ ದೇವಸ್ಥಾನದಿಂದ ಹೊರಟು, ಮಾರುಕಟ್ಟೆ 100 ಅಡಿ ರಸ್ತೆ.ವಿವಿ ರಸ್ತೆ. ಮಾರ್ಗವಾಗಿ ಸಂಚರಿಸಿ, ಸಂಜಯ್ ವೃತ್ತ ತಲುಪಿದವು. ಶಾಸಕ ಪಿ ರವಿಕುಮಾರ್ ಗೌಡ ಆಟೊ ರ್‍ಯಾಲಿ ಆಯೋಜನೆಯನ್ನು ಶ್ಲಾಘಿಸಿ, ಕನ್ನಡ ಪರ ಚಟುವಟಿಕೆಗೆ ಬೆಂಬಲ ಸೂಚಿಸಿದರು.


