ಆಜ್ಹಾನ್ ಕಿರಿಕಿರಿ : ಸಾರ್ವಜನಿಕರಿಂದ ದೂರು
ನಾಗಮಂಗಲ : ಪಟ್ಟಣದ ಹೃದಯಭಾಗದಲ್ಲಿರುವ ಜಾಮಿಯಾ ಮಸೀದಿಯಲ್ಲಿನ ಧ್ವನಿವರ್ಧಕಗಳಿಗೆ ಸೌಂಡ್ ಹೆಚ್ಚು ನೀಡಲಾಗುತ್ತಿದ್ದು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ ಇದರಿಂದ ನಮಗೆ ಮುಕ್ತಿ ನೀಡಬೇಕೆಂದು ಮಸೀದಿ ಸುತ್ತಮುತ್ತಲಿನ ಜನರು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ನಡೆದಿದೆ.
ಪಟ್ಟಣದ ಪುರಾಣ ಪ್ರಸಿದ್ಧ ಹುಲ್ಲೆಸೆಳೆ ಆಂಜನೇಯ ಸ್ವಾಮಿ ದೇವಾಲಯದ ಪಕ್ಕದಲ್ಲಿರುವ ಜಾಮಿಯಾ ಮಸೀದಿಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ 8 ವರ್ಷಗಳ ಹಿಂದೆಯೇ ತಡೆಯಾಜ್ಞೆ ನೀಡಿದೆ ಆದರೂ ಕಾನೂನು ಬಾಹಿರವಾಗಿ ನಿರ್ಮಿಸಲಾಗಿರುವ ಈ ಮಸೀದಿಯಲ್ಲಿಯೇ ಪ್ರತಿದಿನ ಫಜ್ರ್ : ಸೂರ್ಯೋದಯಕ್ಕೂ ಮುನ್ನ ಝುಹ್ರ್ : ಮಧ್ಯಾಹ್ನ ಸೂರ್ಯನು ನೆತ್ತಿಯ ಮೇಲಿಂದ ಪಶ್ಚಿಮಕ್ಕೆ ಸರಿದಾಗ ಅಸರ್ : ಸಂಜೆ ಸೂರ್ಯಾಸ್ತಕ್ಕೆ ಮುನ್ನ
ಮಗ್ರಿಬ್ : ಸೂರ್ಯಾಸ್ತದ ತಕ್ಷಣ
ಇಶಾ : ರಾತ್ರಿ ಕತ್ತಲಾದ ನಂತರದ ಸಮಯದಲ್ಲಿ ಒಟ್ಟು ಐದು ಬಾರಿ ಧ್ವನಿವರ್ಧಕಗಳನ್ನು ಮಸೀದಿಯ ಸುತ್ತಲೂ ಅಳವಡಿಸಿ ಹೆಚ್ಚಿನ ಸೌಂಡ್ ನೀಡಿ ಆಜ್ಹಾನ್ ಕೂಗುವುದರಿಂದ ಮಸೀದಿಯ ಸುತ್ತ-ಮುತ್ತಲ ಬೀದಿಗಳಾದ ಕುಂಬಾರ ಬೀದಿ ಬಣಜಿಗರ ಬೀದಿ ಆಚಾರ್ ಬೀದಿ ಪಡುವಲಪಟ್ಟಣ ರಸ್ತೆಯಲ್ಲಿರುವ ನಿವಾಸಿಗಳಿಗೆ ಹೆಚ್ಚಿನ ತೊಂದರೆಯಾಗುತ್ತಿದ್ದು ಮಕ್ಕಳಿಗೆ ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ವಿದ್ಯಾಭ್ಯಾಸಕ್ಕೂ ತುಂಬಾ ಅಡಚಣೆಯಾಗುತ್ತಿದ್ದು ವಯೋವೃದ್ಧರಿಗೆ ಹೃದಯಾಘಾತವಾಗುವ ಸಂಭವವಿದೆ.
ಸಾರ್ವಜನಿಕರಿಗೆ ತೊಂದರೆಯಾಗುವ ಮೊದಲು ಪೊಲೀಸ್ ಇಲಾಖೆ ಕಾನೂನಾತ್ಮಕ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕವಾಗಿ ದಾವೆ ಹೂಡಲಾಗಿದೆ. ಸಾರ್ವಜನಿಕರೊಂದಿಗೆ ಮಾತನಾಡಿದ ಟೌನ್ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಶಿವಕುಮಾರ್ ಮಸೀದಿಗೆ ಸಂಬಂಧಪಟ್ಟವರನ್ನು ಠಾಣೆಗೆ ಕರೆಸಿ ಕಾನೂನಿನ ಪ್ರಕಾರ ಧ್ವನಿವರ್ಧಕದಲ್ಲಿ ಸೌಂಡ್ ಕಡಿಮೆ ಮಾಡಿಸುತ್ತೇವೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಾಮಿಯಾ ಮಸೀದಿಯ ಸುತ್ತಮುತ್ತಲಿನ ಸಾರ್ವಜನಿಕರು ಹಾಜರಿದ್ದರು.


