ಮಂಡ್ಯ ಮಿಮ್ಸ್ ನಿರ್ದೇಶಕರಿಗೆ ಜಿಲ್ಲಾಧಿಕಾರಿಯಿಂದ ಕಾರಣ ಕೇಳುವ ನೋಟಿಸ್: 24 ಗಂಟೆಯೊಳಗೆ ಉತ್ತರಕ್ಕೆ ಸೂಚನೆ
ಮಂಡ್ಯ, ನ.26: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಮಿಮ್ಸ್) ನಿರ್ದೇಶಕ ನರಸಿಂಹಮೂರ್ತಿ ಅವರಿಗೆ ಮಂಡ್ಯ ಜಿಲ್ಲಾಧಿಕಾರಿ ಅವರು ಕಾರಣ ಕೇಳುವ ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ ತಲುಪಿದ 24 ಗಂಟೆಯೊಳಗೆ ಲಿಖಿತ ಸಮಜಾಯಿಷಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ SAIL ಮತ್ತು BAIL ಸಹಯೋಗದೊಂದಿಗೆ ಕೈಗೊಳ್ಳುತ್ತಿರುವ ಕಾಮಗಾರಿಯ ಪ್ರಗತಿಯ ಕುರಿತು ಜಿಲ್ಲಾಸ್ಪತ್ರೆಯ ಆವರಣದಲ್ಲಿ ಅಳವಡಿಸಲಾಗಿದ್ದ ಬ್ಯಾನರ್‌ನಲ್ಲಿನ ಪ್ರಧಾನ ಮಂತ್ರಿ ಹಾಗೂ ಕೇಂದ್ರ ಸಚಿವರ ಭಾವಚಿತ್ರಕ್ಕೆ ಟೇಪ್ ಅಂಟಿಸಲಾಗಿದೆ. ಈ ವಿಷಯ ಮಾಧ್ಯಮಗಳ ಮೂಲಕ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ.
ಗಣ್ಯರ ಭಾವಚಿತ್ರಕ್ಕೆ ಟೇಪ್ ಅಂಟಿಸಿರುವುದು ಗೌರವಾನ್ವಿತರಿಗೆ ಅಗೌರವ ತೋರಿದಂತಾಗುತ್ತದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ಸಂಸ್ಥೆಯ ಮುಖ್ಯಸ್ಥರಾಗಿ ನಿರ್ದೇಶಕರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕಿತ್ತು. ಆದರೆ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದೆ ಲೋಪವೆಸಗಿದ್ದು, ಆವರಣದಲ್ಲಿ ಈ ರೀತಿಯ ಘಟನೆ ನಡೆದಿರುವುದಕ್ಕೆ ನೇರವಾಗಿ ಹೊಣೆಗಾರರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ತವ್ಯ ಲೋಪದ ಕಾರಣಕ್ಕೆ ನಿರ್ದೇಶಕರ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಏಕೆ ಶಿಫಾರಸು ಮಾಡಬಾರದು ಎಂಬುದಕ್ಕೆ, ಘಟನೆಗೆ ಮುಖ್ಯ ಕಾರಣವೇನು ಎಂಬುದನ್ನು ಸೂಕ್ತ ಕಾರಣಗಳೊಂದಿಗೆ ಖುದ್ದಾಗಿ ವಿವರಿಸಬೇಕು. ತಪ್ಪಿದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಸಂಸದ ಕುಮಾರಸ್ವಾಮಿ ಪ್ರಯತ್ನದ ಭಾಗವಾಗಿ ಸಿಎಸ್ ಆರ್ ನಿಧಿಯಡಿ ಎರಡು ಮುಕ್ಕಾಲು ಕೋಟಿ ಹಣವನ್ಮು ಮಂಡ್ಯ ಮಿಮ್ಸ್ ಗೆ ಬಿಡುಗಡೆಗೊಳಿಸಿ ಅದರಡಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತಿತ್ತು..ಈ ಸಂಬಂದ ಅಳವಡಿಸಿದ್ದ ನಾಮಫಲಕದಲ್ಲಿನ ಕುಮಾರಸ್ವಾಮಿ ಪ್ರಧಾನಿ ಮೋದಿಯವರ ಚಿತ್ರ ಹಾಗೂ ಯೋಜನೆಯ ವಿವರಗಳನ್ನು ಬಣ್ಣದ ಮೂಲಕ ಅಳಿಸಿಹಾಕಲಾಗಿತ್ತು.
ಸದ್ಯ ಈ ಕೃತ್ಯವನ್ನು ಮಿಮ್ಸ್ ಅಧಿಕಾರಿಗಳೇ ಮಾಡಿದ್ದಾರೆ ಇದಕ್ಕೆ ಸ್ಥಳೀಯ ಕಾಂಗ್ರೆಸ್ ಜನಪ್ರತಿನಿಧಿಗಳ ಕುಮ್ಮಕ್ಕೆ ಕಾರಣ ಎಂಬುದು ಜ್ಯಾದಳ ನಾಯಕರ ಆರೋಪವಾಗಿದೆ..ನೂರಕ್ಕು ಹೆಚ್ಚು ಭದ್ರತಾ ಸಿಬ್ಬಂದಿ ಇರುವ ಮಿಮ್ಸ್ ನಲ್ಲಿ ಈ ಕೃತ್ಯ ನಡೆದಿರುವುದು ಮಿಮ್ಸ್ ನ ಭದ್ರತಾ ಲೋಪದ ಜತೆಗೆ ಕಾಂಗ್ರೆಸ್ ದಳದ ನಾಯಕರ ಅನಗತ್ಯ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ.ಈ ಪ್ರಕರಣ ಸೋಷಿಯಲ್ ಮೀಡಿಯಾದಲ್ಲಿ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ನವೆಂಬರ್ ೨೬ ದಿನಾಂಕದಲ್ಲಿ ಮಿಮ್ಸ್ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ.
ಕೆಲದಿನಗಳ ಹಿಂದೆ ಮಂಡ್ಯದ ಮಹಿಳಾ ಕಾಲೇಜಿನಲ್ಲಿ ರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ನೀರಿನ ಬಾಟಲ್ ಹಂಚಿಕೆ ಮಾಡುವ ಕುಮಾರಸ್ವಾಮಿ ಅಭಿಮಾನಿಗಳ ಪ್ರಯತ್ನಕ್ಕೆ ಕಾಲೇಜಿನ ಮುಖ್ಯಸ್ಥರು ತಡೆಯೊಡ್ಡಿದ್ದು.ಕೆಡಿಪಿ ಸಭೆಯಲ್ಲಿ ಕುಮಾರಸ್ವಾಮಿ ನಾಮ ಫಲಕವನ್ನು ಸ್ವತಃ ಕಾಂಗ್ರೆಸ್ ಶಾಸಕ ಕದಲೂರು ಉದಯ್ ಕಿತ್ತೆಸೆದದ್ದು ಹಸಿಯಾಗಿರುವಾಗಲೆ ಈ ಪ್ರಕರಣ ನಡೆದಿರುವುದು ಸಂಘರ್ಷಕ್ಕೆ ಕಾರಣವಾಗಿದೆ.
ಈ ಪ್ರಕರಣದಲ್ಲಿ ಮಿಮ್ಸ್ ನಿರ್ದೇಶಕರ ತಲೆದಂಡವಾಗಲಿದೆಯೋ..ಇಲ್ಲವೆ ಕಾಂಗ್ರೆಸ್ ಕೈಗಳು ನಿರ್ದೇಶಕರ ತಲೆ ಕಾಯಲಿವೆಯೋ ಕಾದು ನೋಡಬೇಕಿದೆ.


