Tuesday, May 5, 2026
spot_img

ಮಂಡ್ಯ ವಿವಿಯಲ್ಲಿ ಭ್ರಷ್ಟಾಚಾರ.ನಿಯಮಬಾಹಿರ ಕ್ರಮಗಳು:ಮರಿತಿಬ್ಬೇಗೌಡ ಆರೋಪ

 

ಮಂಡ್ಯ: ಮಂಡ್ಯ ವಿವಿಯ ಪ್ರಭಾರ ಕುಲಪತಿಗಳ ನೇಮಕ ಕಾನೂನು ಬಾಹಿರವಾಗಿದ್ದು ಅವರನ್ನು ವಜಾಗೊಳಿಸಿ, ವಿವಿಯಲ್ಲಿ ನಡೆಸಿರುವ ಭ್ರಷ್ಟಾಚಾರ ಸಂಬಂಧ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ವಹಿಸಬೇಕೆಂದು ವಿಧಾನ ಪರಿಷತ್ ಮಾಜಿ ಸಭಾಪತಿ ಮರಿತಿಬ್ಬೇಗೌಡ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಬಾಲಕರ ಮಹಾವಿದ್ಯಾಲಯದಲ್ಲಿ ವಿಶ್ವವಿದ್ಯಾಲಯ ಆರಂಭಗೊಂಡು ೭ ವರ್ಷಗಳು ಕಳೆದಿವೆ. ಆರಂಭಗೊಂಡ ದಿನದಿಂದ ಮೈಸೂರು ವಿವಿಯ ಎಲ್ಲ ಹಕ್ಕುಗಳನ್ನು ಕಳೆದುಕೊಂಡಿದೆ ಎಂದರು.

ಯುಜಿಸಿ ನಿಯಮಾನುಸಾರ ಇದುವರೆಗೂ ಮಂಡ್ಯ ವಿವಿಗೆ ತನ್ನದೇ ಆದ ಶಾಸನಗಳನ್ನು ಮಾಡಿಕೊಳ್ಳದೇ, ಅವುಗಳನ್ನು ರಚಿಸಿ ರಾಜ್ಯ ಪಾಲರು ಹಾಗೂ ರಾಜ್ಯ ಸರಕಾರದಿಂದ ಅನುಮೋದನೆಯನ್ನೂ ಪಡೆದುಕೊಂಡಿಲ್ಲ. ವಿವಿಯಲ್ಲಿ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಚಟುವಟಿಕೆಗಳನ್ನು ನಿರ್ವಹಿಸುತ್ತಿಲ್ಲ ಎಂದು ದೂರಿದರು.
ಆದ್ದರಿಂದ ಸದರಿ ವಿವಿಯಿಂದ ಪ್ರದಾನ ಮಾಡುವ ಪದವಿಗಳು ಮಾನ್ಯತೆ ಪಡೆದಿರುವುದಿಲ್ಲ. ವಿವಿಗೆ ಸಂಯೋಜನೆಗೊಂಡ ಕಾಲೇಜುಗಳಲ್ಲಿ ಹೊಸ ಕೋರ್ಸ್‌ಗಳಿಗೆ ಅನುಮತಿ ನೀಡುವುದು, ಸಂಶೋಧನಾ ಕೇಂದ್ರಸ್ಥಾಪನೆ, ಸಂಶೋಧನಾ ವಿಧ್ಯಾರ್ಥಿಗಳಿಗೆ ಮಾರ್ಗದರ್ಶಕರ ನೇಮಕ, ಪಿಎಚ್‌ಡಿಗೆ ಪ್ರವೇಶ ಪರೀಕ್ಷೆ ನಡೆಸುವುದು ಕಾನೂನುವಾಹಿರವಾಗಿದೆ ಎಂದು ಸಮಸ್ಯೆಗಳನ್ನು ಮುಂದಿಟ್ಟರು.

ಮಂಡ್ಯ ವಿವಿಗೆ ಪ್ರಭಾರ ಕುಲಪತಿಗಳ ನೇಮಕ ಮಾಡಲು ಸೇವಾ ಜೇಷ್ಠತೆಯಲ್ಲಿ ಮೊದಲನೆಯವರಾದ ಡಾ.ಎಚ್.ಆರ್.ಉಮಾ ಅವರನ್ನು ಬಿಟ್ಟು, ಕಾನೂನು ಬಾಹಿರವಾಗಿ ಪ್ರೊ.ಶಿವಚಿತ್ತಪ್ಪ ಅವರ ಹೆಸರನ್ನು ಪ್ರೊ.ಪುಟ್ಟರಾಜು ಶಿಫಾರಸು ಮಾಡಿರುವುದು ನಿಯಮ ಬಾಹಿರವಾಗಿದೆ.

ಈ ಸಂಬಂಧ ಉನ್ನತ ಶಿಕ್ಷಣ ಸಚಿವರು ಹಾಗೂ ಅವರ ಕಾರ್‍ಯದರ್ಶಿಗಳಿಗೆ ಇದುವರೆಗೆ ೬ ಪತ್ರಗಳನ್ನು ಬರೆದಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಅಲ್ಲದೇ ಸ್ವಂತ ಶಾಸನಗಳಿಲ್ಲದ ವಿವಿಯ ದ್ವಾರ ಬಾಗಿಲಿಗೆ ೩ ಕೋಟಿ ರೂ.ನಷ್ಟು ವೆಚ್ಚವಾಗುವುದೇ ಎಂದು ಪ್ರಶ್ನಿಸಿ ಸ್ವಾಗತ ಕಮಾನು ನಿರ್ಮಾಣದಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವುದಾಗಿ ಆರೋಪಿಸಿದರು.

ಪ್ರೊ.ಶಿವಚಿತ್ತಪ್ಪ ಅವರು ಪ್ರಭಾರ ಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ರಾರಂಭವೇ ಆಗದ ಎಂಬಿಎ ಮತ್ತು ಎಂಸಿಎ ಕೋರ್ಸ್‌ಗಳ ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯಕ್ಕೆ ೨೨ ಲಕ್ಷ ರೂ. ವೆಚ್ಚದಲ್ಲಿ ಹಾಗೂ ಘಟಕ ಕಾಲೇಜಿನ ಗ್ರಂಥಾಲಯಕ್ಕೆಂದು ೪೦ ಲಕ್ಷ ರೂ ವೆಚ್ಚದಲ್ಲಿ ಪುಸ್ತಕಗಳನ್ನು ಖರೀದಿ ಮಾಡಿದ್ದಾರೆ.

ಕಂಪ್ಯೂಟರ್‌ಗಳನ್ನು ಖರೀದಿ ಮಾಡದೇ ಲಕ್ಷಾಂತರ ರೂ ವೆಚ್ಚದಲ್ಲಿ ಅದರ ಪರಿಕರಗಳ ಖರೀದಿ ಹಾಗೂ ಪುಟ್ಟರಾಜು ಅವಧಿಯಲ್ಲೇ ೫ ಕೋಟಿ ರೂ ವೆಚ್ಚದ ಪೀಠೋಪಕರಣ ಖರೀದಿ ಮಾಡಿದ್ದರೂ ಮತ್ತೇ ಪೀಠೋಪಕರಣಗಳನ್ನು ಖರೀದಿ ಮಾಡಿ ಕೊಠಡಿಯಲ್ಲಿ ಕೂಡಿಸಿ ಇಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಕಾಲೇಜಿನ ಕಾವಲುಗಾರರು ಮತ್ತು ಇತರೆ ಸಿಬ್ಬಂದಿಗಳನು ನಿಯಮ ಬಾಹಿರವಾಗಿ ನೇಮಕ ಮಾಡಿಕೊಳ್ಳಲಾಗಿದೆ. ೨೦ ಮಂದಿ ಕೆಲಸ ಮಾಡಿದರೆ. ೫೦ ಮಂದಿ ನೌಕರರ ಹೆಸರಿನಲ್ಲಿ ವೇತನ ನೀಡುತ್ತಿದ್ದಾರೆ. ಹೊರಗುತ್ತಿಗೆ ನೀಡಿಕೆಯಲ್ಲು ಅಕ್ರಮ ಎಸಗಿ ಹಣ ಲಪಟಾಯಿಸಲಾಗುತ್ತಿದೆ.ಮೈಸೂರು ವಿವಿಯಿಂದ ೭ ಮಂದಿ ಅತಿಥಿ ಉಪನ್ಯಾಸಕರನ್ನು ಕರೆಸಿಕೊಳ್ಳಲಾಗಿದ್ದು, ಕೆಲಸ ನೀಡದೇ ಸುಮ್ಮನೆ ಕೂರಿಸಿಕೊಂಡಿದ್ದಾರೆ. ಅತಿಥಿ ಶಿಕ್ಷಕರು ಸೇರಿದಂತೆ ಕಾಲೇಜಿನ ಶಿಕ್ಷಕರಿಗೂ ಸರಕಾರವೇ ವೇತನ ನೀಡುತ್ತಿದೆ. ಆದರೆ ಮಂಡ್ಯ ಶಾಸಕರು ಮಂಡ್ಯ ವಿವಿ ಲಾಭದಾಯಕವಾಗಿ ನಡೆಯುತ್ತಿದೆ ಎಂದು ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ ಎಂದು ವ್ಯಂಗ್ಯವಾಡಿದರು.

ಯುಜಿಸಿ ನಿಯಮಾವಳಿಗಳ ಪ್ರಕಾರ ಅರ್ಹತೆ ಇಲ್ಲದಿದ್ದರೂ ಪಿಎಚ್.ಡಿ ಪ್ರವೇಶ ಪರೀಕ್ಷೆ ನಡೆಸಿದ್ದಾರೆ. ಅದರಲ್ಲಿ ಶೇ.೯೫ರಂಷು ಫಲಿತಾಂಶ ಪ್ರಕಟಿಸಿದ್ದು, ೧೮೬ ಪರೀಕ್ಷಾರ್ಥಿಗಳ ಪೈಕಿ ೧೩೬ ಮಂದಿ ತುಮಕೂರು, ಚಿತ್ರದುರ್ಗ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯವರೇ ಆಗಿದ್ದು, ಅವರಿಂದ ಲಕ್ಷಾಂತರ ಹಣ ಸಂಗ್ರಹಿಸಲಾಗಿದೆ. ಕೂಡಲೇ ರಾಜ್ಯಪಾಲರು ಮತ್ತು ರಾಜ್ಯ ಸರಕಾರ ಈ ಸಂಬಂಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲಿ ಲೋಕಾಯುಕ್ತ ಅಥವಾ ಕಾನೂನು ಸಮರ ಸಾರುವುದಾಗಿ ಎಚ್ಚರಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!