ಮಂತ್ರಾಲಯದ ಸಾಹಿತ್ಯ ಸೌರಭ ಕವಿಗೋಷ್ಠಿಗೆ ಪಾಂಡವಪುರದ ಕವಿ ಭರತ್ ಆಯ್ಕೆ
ಪಾಂಡವಪುರ: ಆಂಧ್ರಪ್ರದೇಶದ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಸನ್ನಿಧಿಯಲ್ಲಿ ನ.29ರಂದು ನಡೆಯಲಿರುವ ‘ರಾಷ್ಟ್ರಮಟ್ಟದ ಸಾಹಿತ್ಯ ಸೌರಭ’ ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಪಾಂಡವಪುರದ ಯುವ ಕವಿ ಎಂ. ಭರತ್ ಆಯ್ಕೆಯಾಗಿದ್ದಾರೆ.
ಜ್ಞಾನಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗ, ಈರಮ್ಮ ನಾಗರಾಜಪ್ಪ ಪ್ರತಿಷ್ಠಾನ, ಮಣ್ಣೆಮೋಹನ್ ಪುಸ್ತಕ ಮಾಲೆ ಹಾಗೂ ಪರಿಮಳ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಈ ಬೃಹತ್ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಕವಿಗೋಷ್ಠಿಯಲ್ಲಿ ಭರತ್ ಅವರು ತಮ್ಮ ಸ್ವರಚಿತ ಕವನ ‘ತುಂಗಾ ತೀರದಲಿ’ ವಾಚಿಸಲಿದ್ದಾರೆ.
ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿಗಳಾದ ಪ.ಪೂ. ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ದಿವ್ಯಸಾನ್ನಿಧ್ಯ ವಹಿಸಲಿದ್ದು, ಜ್ಞಾನಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದ ಅಧ್ಯಕ್ಷ ಮಣ್ಣೆ ಮೋಹನ್ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ಕೃತಿಗಳ ಲೋಕಾರ್ಪಣೆ, ಸಂಪಾದಕರ ಸಮಾವೇಶ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ರಾಷ್ಟ್ರಮಟ್ಟದ ಈ ಸಾಹಿತ್ಯ ವೇದಿಕೆಯಲ್ಲಿ ಪಾಂಡವಪುರ ತಾಲ್ಲೂಕನ್ನು ಪ್ರತಿನಿಧಿಸುತ್ತಿರುವ ಭರತ್ ಅವರಿಗೆ ಸ್ಥಳೀಯ ಸಾಹಿತ್ಯಾಸಕ್ತರು, ಕುಟುಂಬಸ್ಥರು ಹಾಗೂ ಗಣ್ಯರು ಶುಭ ಹಾರೈಸಿದ್ದಾರೆ


