ವಿದ್ಯಾರ್ಥಿನಿಯರಿಗೆ ಕಿರುಕುಳ ಆರೋಪ: ನಾಗಮಂಗಲ ಸರ್ಕಾರಿ ಕಾಲೇಜು ಉಪನ್ಯಾಸಕನಿಗೆ ತರಾಟೆ
ಮಂಡ್ಯ: ವಿದ್ಯಾರ್ಥಿನಿಯರ ಮೊಬೈಲ್ ಸಂಖ್ಯೆ ಪಡೆದು ಪ್ರೀತಿಯ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದರೆಂಬ ಆರೋಪದ ಮೇಲೆ, ನಾಗಮಂಗಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರೊಬ್ಬರನ್ನು ವಿದ್ಯಾರ್ಥಿನಿಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಕಾಲೇಜಿನ ಉಪನ್ಯಾಸಕ ಗಂಗಾ ಎಂಬುವವರು ವಿದ್ಯಾರ್ಥಿನಿಯರ ಮೊಬೈಲ್ ಸಂಖ್ಯೆ ಪಡೆದು ನಿರಂತರವಾಗಿ ಚಾಟ್ ಮಾಡುತ್ತಿದ್ದರು. ಈ ವೇಳೆ ‘ಐ ಲವ್ ಯೂ ಚಿನ್ನು’ ಎಂಬಂತಹ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದರು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಉಪನ್ಯಾಸಕರ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿಯರು ಆಕ್ರೋಶಗೊಂಡು ಅವರನ್ನು ಪ್ರಶ್ನಿಸಿದರು. ಕಾಲೇಜಿನ ಸಿಬ್ಬಂದಿ ಕೊಠಡಿಯಲ್ಲಿ ಪೊಲೀಸರ ಸಮ್ಮುಖದಲ್ಲೇ ವಿದ್ಯಾರ್ಥಿನಿಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಉಪನ್ಯಾಸಕರು ಕೈಮುಗಿದು ಕ್ಷಮೆ ಯಾಚಿಸಿದರು ಎಂದು ತಿಳಿದುಬಂದಿದೆ. ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿರುವುದನ್ನು ಗಮನಿಸಿದ ಉಪನ್ಯಾಸಕರು ಮುಖಕ್ಕೆ ಮಾಸ್ಕ್ ಧರಿಸಿಕೊಂಡಿದ್ದರು ಎನ್ನಲಾಗಿದೆ.
ವಿದ್ಯಾರ್ಥಿನಿಯರ ಆರೋಪಗಳ ಕುರಿತು ಪೊಲೀಸ್ ಇಲಾಖೆ ಹಾಗೂ ಕಾಲೇಜು ಆಡಳಿತ ಮಂಡಳಿ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ವ್ಯಕ್ತವಾಗಿದೆ. ಘಟನೆ ನಾಗಮಂಗಲ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


