**ಹೊಳಲು ಗ್ರಾಮದಲ್ಲಿ ಎರಡು ಚಿರತೆಗಳ ಹಾವಳಿ; ಕುರಿಮರಿಗಳ ಬಲಿ, ಬೋನು ಇಡಲು ಗ್ರಾಮಸ್ಥರ ಮನವಿ**
**ಮಂಡ್ಯ:** ತಾಲೂಕಿನ ಹೊಳಲು ಗ್ರಾಮದ ಮುದ್ದಯ್ಯನ ಕಟ್ಟೆ ಹಳ್ಳದ ಬಳಿ ಎರಡು ಮೂರು ದಿನಗಳಿಂದ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ರೈತರು ಮತ್ತು ಗ್ರಾಮಸ್ಥರು ಭೀತಿಯಲ್ಲಿದ್ದಾರೆ. ಮಂಗಳವಾರ ಸಂಜೆ ಚಿರತೆಗಳು ಕುರಿಮರಿಗಳ ಮೇಲೆ ದಾಳಿ ಮಾಡಿವೆ.
ಹೊಳಲು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಎಸ್. ಶಿವರಾಜ್ ಅವರು ಎಂದಿನಂತೆ ಸುಮಾರು 15 ಕುರಿಮರಿಗಳನ್ನು ಮೇಯಿಸಲು ಗದ್ದೆಯ ಕಡೆ ಹೊಡೆದುಕೊಂಡು ಹೋಗಿದ್ದರು. ಪಕ್ಕದ ಜಮೀನಿನಲ್ಲಿ ಮರಿಗಳನ್ನು ಮೇಯಲು ಬಿಟ್ಟು, ತಮ್ಮ ಜಮೀನಿನಲ್ಲಿ ಬದನೆಕಾಯಿ ಕೀಳುತ್ತಿದ್ದರು. ಆಗ ಕುರಿಮರಿಗಳು ಗಾಬರಿಯಿಂದ ಓಡಿ ಬಂದವು. ಅವರು ಹೊರಬಂದು ನೋಡಿದಾಗ ಮೂರು ಮರಿಗಳು ಕಾಣೆಯಾಗಿದ್ದವು.
ಶಿವರಾಜ್ ಅವರು ಊರಿಗೆ ಬಂದು ಅಕ್ಕಪಕ್ಕದ ಗದ್ದೆಯ ರೈತರಾದ ಅಶ್ವತ್ಥ್, ಶೇಖರ್ ಮತ್ತಿತರರನ್ನು ಕರೆದುಕೊಂಡು ರಾತ್ರಿ 9 ಗಂಟೆಗೆ ಮತ್ತೆ ಸ್ಥಳಕ್ಕೆ ತೆರಳಿದರು. ಬದನೆಕಾಯಿ ಗದ್ದೆಯಲ್ಲಿ ಒಂದು ಮರಿಯನ್ನು ಸಂಪೂರ್ಣವಾಗಿ ತಿಂದು ಹಾಕಲಾಗಿತ್ತು. ಇನ್ನೆರಡು ಮರಿಗಳ ಕುತ್ತಿಗೆ ಕಚ್ಚಿ ರಕ್ತ ಕುಡಿದು ಬಿಟ್ಟುಹೋಗಿದ್ದವು. ಬ್ಯಾಟರಿ ಬೆಳಕು ಹಾಯಿಸಿದಾಗ ಚಿರತೆ ಮರಿಗಳನ್ನು ತಿನ್ನುತ್ತಿರುವುದು ಕಂಡುಬಂತು. ನಂತರ ಎರಡು ದೊಡ್ಡ ಗಾತ್ರದ ಚಿರತೆಗಳು ಪಕ್ಕದ ಕಬ್ಬಿನ ಗದ್ದೆಗೆ ನುಗ್ಗಿ ಮರೆಯಾದವು ಎಂದು ರೈತರು ತಿಳಿಸಿದ್ದಾರೆ.
ಬುಧವಾರ ಸಂಜೆ 6 ಗಂಟೆಗೆ ಅದೇ ಗದ್ದೆಯ ಬಳಿ ಎರಡು ಚಿರತೆಗಳು ಮತ್ತೆ ಕಾಣಿಸಿಕೊಂಡಿವೆ. ಕಳೆದ ವರ್ಷವೂ ಗಾಣದಾಳು ಮತ್ತು ಚಂದಗಾಲು ರಸ್ತೆಯ ಮಧ್ಯೆ ದೊಡ್ಡ ಚಿರತೆ ಪ್ರತ್ಯಕ್ಷವಾಗಿತ್ತು.
ಚಿರತೆ ಭೀತಿಯಿಂದ ರೈತರು ಮತ್ತು ಸಾರ್ವಜನಿಕರು ಆತಂಕಗೊಂಡಿದ್ದಾರೆ. ಅಕ್ಕಪಕ್ಕದ ಗ್ರಾಮಸ್ಥರು ಮತ್ತು ಗದ್ದೆಗಳಲ್ಲಿ ಕೆಲಸ ಮಾಡುವ ರೈತರು ಎಚ್ಚರಿಕೆಯಿಂದ ಕೆಲಸಕ್ಕೆ ಹೋಗಬೇಕೆಂದು ಮನವಿ ಮಾಡಲಾಗಿದೆ. ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಗ್ರಾಮಸ್ಥರ ಮನವಿಗೆ ಸ್ಪಂದಿಸಿ, ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಿ ಚಿರತೆ ಹಿಡಿಯಲು ಬೋನು ಇಡುವ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
*ಚಿತ್ರ-ವರದಿ: ಕೆ.ಪಿ. ಕುಮಾರ್, ಹೊಳಲು


