ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳ ಮೇಲೆ ಸರ್ಕಾರದ ನಿಗಾ; ಮುದ್ರಣಾಲಯಗಳ ಪರಿಶೀಲನೆಗೆ ವಾರ್ತಾ ಇಲಾಖೆ ಸುತ್ತೋಲೆ
**ಪ್ರತಿ ತಿಂಗಳು ಕನಿಷ್ಠ ನಾಲ್ಕು ಪತ್ರಿಕೆಗಳ ಮುದ್ರಣಾಲಯಗಳಿಗೆ ಭೇಟಿ ನೀಡಿ ಪರಿಶೀಲನೆ – ದಾಖಲೆಗಳೊಂದಿಗೆ ಫೋಟೋ, ವಿಡಿಯೋ ವರದಿ ಸಲ್ಲಿಸಲು ಜಿಲ್ಲಾ ವಾರ್ತಾಧಿಕಾರಿಗಳಿಗೆ ಸೂಚನೆ**
**ಬೆಂಗಳೂರು, ಅ.30:**
ರಾಜ್ಯ ಸರ್ಕಾರದ ಮಾಧ್ಯಮ ಪಟ್ಟಿಯಲ್ಲಿ ನೋಂದಣಿಯಾಗಿರುವ ಸ್ಥಳೀಯ ಹಾಗೂ ಪ್ರಾದೇಶಿಕ ದಿನಪತ್ರಿಕೆಗಳ ಕ್ರಮಬದ್ಧ ಪ್ರಕಟಣೆ, ಮುದ್ರಣ ಮತ್ತು ಪ್ರಸಾರದ ಕುರಿತು ಪರಿಶೀಲನೆ ನಡೆಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ.
ಇಲಾಖೆಯ ಆಯುಕ್ತರು ಅಕ್ಟೋಬರ್ 28ರಂದು ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಮಾಧ್ಯಮ ಪಟ್ಟಿಯಲ್ಲಿರುವ ಹಲವು ದಿನಪತ್ರಿಕೆಗಳು ಕ್ರಮಬದ್ಧವಾಗಿ ಪ್ರಕಟವಾಗುತ್ತಿಲ್ಲ, ನಿಗದಿತ ಪ್ರಸಾರ ಸಂಖ್ಯೆಗೆ ಅನುಗುಣವಾಗಿ ಮುದ್ರಣವಾಗುತ್ತಿಲ್ಲ, PRGI ಕಾಯ್ದೆಯ ನಿಯಮಗಳನ್ನು ಪಾಲಿಸುತ್ತಿಲ್ಲ ಹಾಗೂ ಆರ್ಎನ್ಐ ಪ್ರಮಾಣಪತ್ರದಲ್ಲಿ ನಮೂದಿಸಿರುವ ಸ್ಥಳದಲ್ಲಿ ಮುದ್ರಣವಾಗುತ್ತಿಲ್ಲ ಎಂಬ ದೂರುಗಳು ಕೇಂದ್ರ ಕಚೇರಿಗೆ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಸರ್ಕಾರದಿಂದ ಪ್ರೋತ್ಸಾಹದ ರೂಪದಲ್ಲಿ ಸ್ಥಳೀಯ ಹಾಗೂ ಪ್ರಾದೇಶಿಕ ಪತ್ರಿಕೆಗಳಿಗೆ ಜಾಹೀರಾತು ನೀತಿಯ ಅನುಷ್ಠಾನ ನಿಯಮಗಳನ್ವಯ ಕೇಂದ್ರ ಮತ್ತು ಜಿಲ್ಲಾ ಕಚೇರಿಗಳ ಮೂಲಕ ಜಾಹೀರಾತುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಇದಕ್ಕಾಗಿ ಸರ್ಕಾರ ಹಣ ವೆಚ್ಚ ಮಾಡುತ್ತಿರುವುದರಿಂದ ಪತ್ರಿಕೆಗಳ ನೈಜ ಪ್ರಕಟಣೆ ಮತ್ತು ಪ್ರಸಾರದ ಬಗ್ಗೆ ಪರಿಶೀಲನೆ ನಡೆಸಲು ಇಲಾಖೆ ನಿರ್ಧರಿಸಿದೆ.
**ಪ್ರತಿ ತಿಂಗಳು ನಾಲ್ಕು ಮುದ್ರಣಾಲಯಗಳ ಪರಿಶೀಲನೆ**
ಪ್ರತಿ ಜಿಲ್ಲಾ ವಾರ್ತಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಕನಿಷ್ಠ ನಾಲ್ಕು ಪತ್ರಿಕೆಗಳ ಮುದ್ರಣಾಲಯಗಳಿಗೆ ಪ್ರತಿ ತಿಂಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮಾಧ್ಯಮ ಪಟ್ಟಿಗೆ ಪತ್ರಿಕೆಗಳು ಸೇರ್ಪಡೆಯಾದ ತಿಂಗಳು ಮತ್ತು ವರ್ಷದ ಆಧಾರದ ಮೇಲೆ ಜೇಷ್ಠತಾ ಪಟ್ಟಿ ಸಿದ್ಧಪಡಿಸಿ, ಸರದಿಯಂತೆ ಪರಿಶೀಲನೆ ನಡೆಸಬೇಕು. ಪರಿಶೀಲನಾ ಮಾಸಿಕ ವರದಿಯನ್ನು ಪತ್ರಿಕೆಗಳ ಮಾಸಿಕ ಹಾಜರಾತಿ ವಿವರದೊಂದಿಗೆ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಕೇಂದ್ರ ಕಚೇರಿಯ ವಾಣಿಜ್ಯ ಮತ್ತು ಪ್ರಚಾರ ಶಾಖೆಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
**ಯಾವೆಲ್ಲ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ?**
ಪರಿಶೀಲನೆಯ ಸಂದರ್ಭದಲ್ಲಿ ಪತ್ರಿಕೆಗಳ ಮೂಲ ಮತ್ತು ಪರಿಷ್ಕೃತ ಆರ್ಎನ್ಐ ದಾಖಲೆಗಳು, ಡಿಕ್ಲರೇಷನ್, ವೃತ್ತಿ ತೆರಿಗೆ ಮತ್ತು ಜಿಎಸ್ಟಿ ನೋಂದಣಿ ಹಾಗೂ ಪಾವತಿ ವಿವರ, ಮುದ್ರಣಾಲಯದ ಸಂಪೂರ್ಣ ವಿಳಾಸ, ವಿದ್ಯುತ್ ಬಿಲ್, ಮುದ್ರಣ ಯಂತ್ರದ ಸಾಮರ್ಥ್ಯ, ಏಜೆಂಟರ ನೇಮಕಾತಿ ಮತ್ತು ವಿಳಾಸಗಳ ವಿವರ, ಪತ್ರಿಕೆ ಸಾಗಣೆ ವಾಹನಗಳ ಒಪ್ಪಂದ, ಕಳೆದ ಒಂದು ವರ್ಷದ ಡೈಲಿ ರಿಜಿಸ್ಟರ್, ಆಡಿಟ್ ವರದಿ, ವಾರ್ಷಿಕ ವರದಿ, ಆದಾಯ ತೆರಿಗೆ ಪಾವತಿ ವಿವರ, ಕಾಗದ ಖರೀದಿ ಬಿಲ್ ಹಾಗೂ ಇ-ವೇ ಬಿಲ್ಗಳನ್ನು ಪರಿಶೀಲಿಸಲಾಗುತ್ತದೆ.
ಇದರ ಜೊತೆಗೆ ಮುದ್ರಣ ಕಾಗದದ ದಾಸ್ತಾನು, ಕಚೇರಿ ಸಿಬ್ಬಂದಿ ವಿವರ, ಬ್ಯಾಂಕ್ ಸ್ಟೇಟ್ಮೆಂಟ್, ಪತ್ರಿಕೆ ವಿತರಣೆಯ ವಿವರ, ಇತರ ಜಿಲ್ಲೆಗಳಿಗೆ ಪತ್ರಿಕೆ ವಿತರಣೆ, ಮಾಲೀಕತ್ವ ಮತ್ತು ಸಂಪಾದಕತ್ವ ಬದಲಾವಣೆ, PRGI ಹಾಜರಾತಿ ಹಾಗೂ ಮುದ್ರಣಾಲಯದ ಪರವಾನಗಿ ಸೇರಿದಂತೆ ಒಟ್ಟು 26 ಅಂಶಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ.
**ಅನಿರೀಕ್ಷಿತ ಭೇಟಿ; ಫೋಟೋ, ವಿಡಿಯೋ ದಾಖಲೆ ಕಡ್ಡಾಯ**
ಜಿಲ್ಲಾ ವಾರ್ತಾಧಿಕಾರಿಗಳ ತಂಡವು ಪತ್ರಿಕೆಯ ಮುದ್ರಣಾಲಯ ಮತ್ತು ಪತ್ರಿಕಾ ಕಚೇರಿಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮಾಧ್ಯಮ ಪಟ್ಟಿಗೆ ಸೇರ್ಪಡೆಗೊಳ್ಳುವ ಸಂದರ್ಭದಲ್ಲಿ ಮಾಧ್ಯಮ ಸಮಿತಿಗೆ ಸಲ್ಲಿಸಿರುವ ದಾಖಲೆಗಳೊಂದಿಗೆ ಸ್ಥಳದಲ್ಲಿ ಲಭ್ಯವಿರುವ ದಾಖಲೆಗಳನ್ನು ತುಲನಾತ್ಮಕವಾಗಿ ಪರಿಶೀಲಿಸಬೇಕು.
ಪತ್ರಿಕೆಗಳು ನೈಜವಾಗಿ ಪ್ರಕಟವಾಗುತ್ತಿವೆಯೇ, ನಿಗದಿತ ಪ್ರಸಾರ ಸಂಖ್ಯೆಗೆ ಅನುಗುಣವಾಗಿ ಮುದ್ರಣವಾಗುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಪರಿಶೀಲನೆಯ ಸಂದರ್ಭದಲ್ಲಿ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ನಡೆಸಿ, ಅಗತ್ಯ ದಾಖಲೆಗಳೊಂದಿಗೆ ಕೇಂದ್ರ ಕಚೇರಿಗೆ ವರದಿ ಸಲ್ಲಿಸುವುದನ್ನೂ ಕಡ್ಡಾಯಗೊಳಿಸಲಾಗಿದೆ.
ಈ ಸುತ್ತೋಲೆಯು ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳ ಪ್ರಕಟಣೆ, ಮುದ್ರಣ ಮತ್ತು ಪ್ರಸಾರದ ಪಾರದರ್ಶಕತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ನಿಯಮಗಳನ್ನು ಪಾಲಿಸದೆ ಕೇವಲ ಸರ್ಕಾರಿ ಜಾಹೀರಾತುಗಳ ಲಾಭ ಪಡೆಯುತ್ತಿರುವ ಪತ್ರಿಕೆಗಳ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಈಗ ಕುತೂಹಲ ಮೂಡಿಸಿದೆ.


